ತಾಯಿ - ಮಗ ನಾಪತ್ತೆ: ಪ್ರಕರಣ ದಾಖಲು

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ಖಾಸಗಿ ಬಸ್ಸು ನಿಲ್ದಾಣದಿಂದ ದಾವಣಗೆರೆ ಮೂಲದ ಸಲ್ಮಾ ಬಾನು (37) ಮತ್ತು ಆಕೆಯ ಪುತ್ರ ಮುಹಮ್ಮದ್ ಯೂನಸ್ (14) ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಚಿಲಾಪೂರ ಗ್ರಾಮದಲ್ಲಿ ವಾಸವಾಗಿದ್ದ ದಾದಾಪೀರ್ ಅವರು ಪತ್ನಿ ಸಲ್ಮಾ ಮತ್ತು ಪುತ್ರ ಯೂನಸ್ ನೊಂದಿಗೆ ಶಿವಮೊಗ್ಗದಿಂದ ಬಸ್ಸಿನಲ್ಲಿ ಹೊರಟು ಜು.9ರಂದು ಬೆಳಗ್ಗೆ 8 ಗಂಟೆ ವೇಳೆಗೆ ಮಂಗಳೂರು ಬಸ್ಸು ನಿಲ್ದಾಣದಲ್ಲಿ ಬಂದು ಇಳಿದಿದ್ದಾರೆ. ಬಳಿಕ ಬಜ್ಪೆಗೆ ತೆರಳುವ ಉದ್ದೇಶದಿಂದ ತನ್ನ ಚಿಕ್ಕಪ್ಪನ ಮಗಳು ಗುಲ್ಜರ್‌ಗೆ ಕರೆ ಮಾಡಿ ಕೆಲಸದ ಬಗ್ಗೆ ವಿಚಾರಿಸಿದ್ದು, ಅದಕ್ಕೆ ಆಕೆ 2-3 ದಿನ ಬಿಟ್ಟು ಬನ್ನಿ ಎಂದು ತಿಳಿಸಿದ್ದಾಳೆ ಎನ್ನಲಾಗಿದೆ.
ಬಳಿಕ ದಾದಾಪೀರ್ ಶೌಚಾಲಯಕ್ಕೆ ಹೋಗಿ ವಾಪಾಸು ಬಂದು ನೋಡುವಾಗ ಪತ್ನಿ ಮತ್ತು ಮಗ ಸ್ಥಳದಲ್ಲಿ ಇರಲಿಲ್ಲ. ಎಲ್ಲ ಕಡೆ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗಿಲ್ಲ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಸಲ್ಮಾ ಬಾನು 5 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ಕನ್ನಡ ಉರ್ದು ಭಾಷೆ ತಿಳಿದಿದೆ. ನಾಪತ್ತೆಯಾಗುವ ವೇಳೆ ಹಸಿರು ಬಣ್ಣದ ಟಾಪ್ ಮತ್ತು ಪ್ಯಾಂಟ್ ಧರಿಸಿದ್ದು, ಕಪ್ಪು ಬಣ್ಣದ ಬುರ್ಖಾ ಧರಿಸಿದ್ದರು. ಯೂನಸ್ 4 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ಕನ್ನಡ ಉರ್ದು ಭಾಷೆ ತಿಳಿದಿದೆ. ನಾಪತ್ತೆಯಾಗುವ ವೇಳೆ ಬಿಳಿ ಬಣ್ಣದ ಟಿ-ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ. ಈ ಚಹರೆಯ ತಾಯಿ- ಮಗ ಪತ್ತೆಯಾದರೆ ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.







