ವಾಮಂಜೂರು: ಡಿವೈಎಫ್‌ಐ ಪ್ರತಿಭಟನೆ

ಮಂಗಳೂರು, ಜು13: ರಾಷ್ಟ್ರೀಯ ಹೆದ್ದಾರಿ 169ರ ಚತುಷ್ಪಥ ವಿಸ್ತರಣಾ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಪ್ರದೇಶದಲ್ಲಿ ಭೌಗೋಳಿಕ ಮಾನದಂಡ ಉಲ್ಲಂಘಿಸಿ ನಡೆದಿರುವ ಅವೈಜ್ಞಾನಿಕ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ವಾಮಂಜೂರು ಜಂಕ್ಷನ್‌ನಲ್ಲಿ ರವಿವಾರ ಪ್ರತಿಭಟನೆ ನಡೆಸಿತು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಮಾತನಾಡಿ ಗುರುಪುರ ಸೇತುವೆ ನಿರ್ಮಿಸುವ ವೇಳೆ ಕೆತ್ತಿಕಲ್ ಗುಡ್ಡದಿಂದ ಭಾರೀ ಪ್ರಮಾಣದ ಮಣ್ಣು ತೆಗೆಯಲಾಗಿತ್ತು. ಪರ್ಮಿಟ್ ಇಲ್ಲದೆ ಅಕ್ರಮವಾಗಿ ಮಣ್ಣು ಮಾರಾಟ ಮಾಡಲಾಗಿದೆ. ಈ ವಿಷಯ ಗಣಿ ಇಲಾಖೆ ಸಹಿತ ಜಿಲ್ಲಾಡಳಿತಕ್ಕೆ ಗೊತ್ತಿ ದ್ದರೂ ಮೌನವಾಗಿತ್ತು. ವಯನಾಡು ಸಂತ್ರಸ್ತರಿಗೆ ಕೇರಳ ಸರಕಾರ 500ಕ್ಕೂ ಹೆಚ್ಚು ಮನೆ ನಿರ್ಮಿಸಿ ಕೊಡುತ್ತಿದೆ. ಸಿದ್ಧರಾಮಯ್ಯ ಸರಕಾರ ಇಂತಹ ವಿಚಾರಗಳ ಬಗ್ಗೆ ಅಸಡ್ಡೆ ತೋರಿಸುತ್ತಿದೆ. ಸಂಸದರು ಮತ್ತು ಶಾಸಕರು ಕೆತ್ತಿಕಲ್‌ನ ಜಟಿಲ ಸಮಸ್ಯೆಗೆ ಪರಿಹಾರ ನೀಡುವ ಬದಲು ದ.ಕ. ಜಿಲ್ಲೆಗೆ ‘ಮಂಗಳೂರು’ ಎಂದು ಪುನಃ ನಾಮಕಾರಣ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ. ಬಡವರ ಕಷ್ಟಗಳಿಗೆ ಸ್ಪಂದಿಸದ ಹಾಗೂ ಉದ್ಯೋಗ ಸೃಷ್ಟಿ ವಿಷಯದಲ್ಲಿ ಆಸಕ್ತಿ ತೋರದ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತಕ್ಕೆ ಧಿಕ್ಕಾರ ಎಂದರು.
ಡಿವೈಎಫ್‌ಐ ಖಜಾಂಚಿ ಮನೋಜ್ ಕುಮಾರ್ ವಾಮಂಜೂರು, ಸಿಪಿಎಂ ಮುಖಂಡ ಬಾಬು ಸಾಲ್ಯಾನ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ವಾಮಂಜೂರು ವಲಯ ಅಧ್ಯಕ್ಷ ದಿನೇಶ್ ಬೊಂಡಂತಿಲ, ಮುಖಂಡರಾದ ಹೊನ್ನಯ್ಯ ಅಮೀನ್, ಭವಾನಿ ಇರುವೈಲು, ಬಾಬು ಅಣೆಬಳಿ ಮತ್ತಿತರರು ಪಾಲ್ಗೊಂಡಿದ್ದರು.





