ಧರ್ಮಸ್ಥಳ ಪ್ರಕರಣ: ಸಮಗ್ರ ತನಿಖೆಗೆ ವಿಮ್ ಆಗ್ರಹ
ಮಂಗಳೂರು, ಜು.13: ಧರ್ಮಸ್ಥಳದಲ್ಲಿ ಹಲವು ವರ್ಷಗಳಿಂದ ನಡೆದ ಲೈಂಗಿಕ ದೌರ್ಜನ್ಯ ಮತ್ತು ಸರಣಿ ಹತ್ಯೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಆಗ್ರಹಿಸಿದ್ದಾರೆ.
ಜೀವ ಭಯದಿಂದ ಉದ್ದೇಶಪೂರ್ವಕವಲ್ಲದೆ ಈ ಕೊಲೆಯ ಪ್ರಕರಣಗಳ ಭಾಗವಾಗಬೇಕಾಗಿ ಬಂದ ವ್ಯಕ್ತಿಯೋರ್ವ ಸ್ವತಃ ಮುಂದೆ ಬಂದು ದೂರು ದಾಖಲಿಸಿದ್ದಾನೆ. ಈ ವ್ಯಕ್ತಿಯ ಆಘಾತಕಾರಿ ಹೇಳಿಕೆಗಳು ಧರ್ಮಸ್ಥಳದ ಕರಾಳ ವಾಸ್ತವಗಳನ್ನು ಅನಾವರಣಗೊಳಿಸುವ ಜೊತೆಗೆ ಈ ಸಮಾಜದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಚಾರಣೆಯು ಕುಂಟುತ್ತಾ ಸಾಗುತ್ತಿದ್ದು ವ್ಯವಸ್ಥೆಯ ಈ ವಿಳಂಬ ನೀತಿಯು ಸಾಕ್ಷ್ಯನಾಶ ಪಡಿಸಲು ವಿಫುಲ ಅವಕಾಶವನ್ನು ನೀಡುತ್ತದೆ. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಸಹಿತ ನೂರಾರು ಅಮಾಯಕರ ಹತ್ಯೆಗಳಿಗೆ ಧರ್ಮಸ್ಥಳವು ಸಾಕ್ಷಿಯಾಗಿದ್ದು, ಅದೆಷ್ಟೋ ಯುವತಿಯರು, ಮಹಿಳೆಯರು ಇಲ್ಲಿನ ಗೋಮುಖ ವ್ಯಾಘ್ರಗಳಿಗೆ ಬಲಿಪಶುಗಳಾಗಿರುವುದು ಸುಸಭ್ಯ, ಸುಸಂಸ್ಕೃತ ನೆಲೆಯ ದುರಂತವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೃತ್ಯಗಳ ಮಹತ್ವದ ಸಾಕ್ಷಿಯೆನಿಸುವ ವ್ಯಕ್ತಿಯೇ ಖುದ್ದಾಗಿ ದ.ಕ.ಎಸ್ಪಿಗೆ ದೂರು ನೀಡಿದ್ದರೂ ರಾಜ್ಯದ ಗೃಹ ಸಚಿವರು ಈವರೆಗೆ ಮೌನವಾಗಿರುವುದು ಧರ್ಮಸ್ಥಳದ ಪ್ರಭಾವಿಗಳನ್ನು ರಕ್ಷಿಸುವ ಸಂಕೇತವೇ? ಫೇಸ್ಬುಕ್ ಪೋಸ್ಟ್ ವಿಚಾರಕ್ಕೂ ರಾತ್ರೋರಾತ್ರಿ ಮನೆಗೆ ನುಗ್ಗಿ ಬಂಧಿಸುವ ಪೊಲೀಸ್ ಇಲಾಖೆಯ ಸಕ್ರಿಯತೆ ಧರ್ಮಸ್ಥಳದ ಸರಣಿ ಕೊಲೆ ಪ್ರಕರಣಗಳಲ್ಲಿ ನಿಷ್ಕ್ರಿಯವಾಗಿರುವುದು ಏನನ್ನು ಸೂಚಿಸುತ್ತದೆ? ಪ್ರಭಾವಿಗಳ ಸುಪರ್ದಿಯಲ್ಲಿ ನಡೆಯುವ ಜನಸಾಮಾನ್ಯರ ಸಾವು ನೋವುಗಳಿಗೆ ನ್ಯಾಯ ನಿರಾಕರಿಸ ಲಾಗುತ್ತಿದೆಯೇ? ಸರಕಾರವು ತನ್ನ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ಫಾತಿಮಾ ನಸೀಮಾ ಒತ್ತಾಯಿಸಿದ್ದಾರೆ.







