ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಮಂಗಳೂರು, ಜು.13: ಮನೆಯಿಂದ ಪಾರ್ಟ್ ಟೈಂ ಕೆಲಸದಿಂದ ಹೆಚ್ಚು ಹಣ ಸಂಪಾದಿಸಬಹುದು ಎಂದು ಇನ್‌ಸ್ಟಾಗ್ರಾಂನಲ್ಲಿ ಬಂದ ಸಂದೇಶವನ್ನು ನಂಬಿ 20,62,713 ರೂ. ಕಳೆದುಕೊಂಡ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 6ರಂದು ಇನ್‌ಸ್ಟಾಗ್ರಾಂ ನೋಡುತ್ತಿರುವಾಗ ಬಂದ ಸಂದೇಶವನ್ನು ಕ್ಲಿಕ್ ಮಾಡಿದಾಗ ವಾಟ್ಸ್‌ಆ್ಯಪ್ ತೆರೆದುಕೊಂಡಿದೆ. ಬಳಿಕ ಸಂಪರ್ಕಕ್ಕೆ ಬಂದ ಅಪರಿಚಿತ ವ್ಯಕ್ತಿ ಟೆಲಿಗ್ರಾಂನಲ್ಲಿ 3 ಲಿಂಕ್ ಕಳುಹಿಸಿ ರೆಸ್ಟೋರೆಂಟ್, ಸ್ಥಳ, ಹೊಟೇಲ್‌ಗಳನ್ನು ಲೈಕ್ ಮಾಡಿ 5 ಸ್ಟಾರ್‌ಗಳನ್ನು ಕೊಟ್ಟು ಕಮೆಂಟ್ ಮಾಡಿ ಎಂದ. ಅಲ್ಲದೆ ಸ್ಕ್ರೀನ್ ಶಾಟ್ ಕಳುಹಿಸಿ ಮನೆಯಿಂದಲೇ ಹಣ ಸಂಪಾದಿಸಬಹುದು ಎಂದು ತಿಳಿಸಿದ್ದ. ಬಳಿಕ ಮೀನಾ ರೆಡ್ಡಿ ಎಂಬ ಟೆಲಿಗ್ರಾಂ ಖಾತೆದಾರೆಯು ತನ್ನ ಬ್ಯಾಂಕ್ ವಿವರ ಪಡೆದುಕೊಂಡಿದ್ದಾಳೆ. ವಿವಿಧ ಟಾಸ್ಕ್‌ಗಳಿಗೆ ಹಂತ ಹಂತವಾಗಿ ನೀಡಿ 120, 200 ರೂ.ಗಳನ್ನು ವರ್ಗಾವಣೆ ಮಾಡಿದ್ದಾಳೆ. ತನ್ನ ಕೆಲವು ಟೆಲಿಗ್ರಾಂ ಖಾತೆಗಳಿಗೆ ಸೇರಿಸಿ, ಟಾಸ್ಕ್ ನೀಡಿದ್ದಾಳೆ. ಟ್ರೇಡಿಂಗ್ ಅಕೌಂಟ್ ಲಿಂಕ್ ಕಳುಹಿಸಿ ರಿಜಿಸ್ಟ್ರೇಷನ್ ಆಗಲು ಸೂಚಿಸಿದ್ದಾಳೆ. ಅದರಂತೆ ತಾನು ಲಿಂಕ್‌ಗೆ ಕ್ಲಿಕ್ ಮಾಡಿ ಮಾಹಿತಿ ತುಂಬಿದೆ. ಟಾಸ್ಕ್ ಪೂರ್ಣ ಗೊಳಿಸಲು ರಾಜೇಶ್ ವರ್ಮಾ ಎಂಬಾತನನ್ನು ಸಂಪರ್ಕಿಸಲು ಸೂಚಿಸಿದ ಮೇರೆಗೆ ಆತನನ್ನೂ ಸಂಪರ್ಕಿಸಿದೆ. ಆತ ಮತ್ತೊಬ್ಬನನ್ನು ಪರಿಚಯಿಸಿದ. ಹೀಗೆ ಹಲವು ಮಂದಿ ತನ್ನಿಂದ 20,62,713 ರೂ.ವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.





