ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ

ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುವ ದಸರಾ ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮುಜುರಾಯಿ ಹಾಗೂ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ರವಿವಾರ ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದ ಸಚಿವರು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ಅವರು, ಮುಂಬರುವ ಉಡುಪಿ ಉಚ್ಚಿಲ ದಸರಾ ಉತ್ಸವ ಸೇರಿದಂತೆ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರಕಾರ ದ ವತಿಯಿಂದ ಸರ್ವ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಮೊಗವೀರ ಮುಖಂಡ ಡಾ. ಜಿ. ಶಂಕರ್ ರವರು ಸಚಿವರಿಗೆ ಶಾಲು ಹೊದಿಸಿ ಗೌರವಿಸಿದರು. ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಾಜಿ ಸಚಿವರುಗಳಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಾಂಗ್ರೆಸ್ ಮುಖಂಡರುಗಳಾದ ಪ್ರಸಾದ್ ರಾಜ್ ಕಾಂಚನ್, ಕಾಪು ದಿವಾಕರ್ ಶೆಟ್ಟಿ, ಮಹಾಜನ ಸಂಘದ ಉಪಾಧ್ಯಕ್ಷರಾದ ಮೋಹನ್ ಬೆಂಗ್ರೆ ಉಪಸ್ಥಿತರಿದ್ದರು.
ಕಾಪು ಹೊಸ ಮಾರಿಗುಡಿಗೆ ಭೇಟಿ: ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿಯವರು ಭಾನುವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು.
ದೇವಳದ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ ಕಲ್ಯ ಅವರು ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.
ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಸರಕಾರದ ಅನುದಾನವಿಲ್ಲದೆ ದಾನಿಗಳ ಮತ್ತು ಭಕ್ತರ ನೆರವಿನಿಂದ ಇಷ್ಟು ದೊಡ್ಡ ದೇವಸ್ಥಾನ ನಿರ್ಮಾಣ ಮಾಡಿರುವುದು ಬಹಳ ಸಂತೋಷ, ಇಲ್ಲಿನ ವಾಸ್ತುಶಿಲ್ಪ ಬಹಳಷ್ಟು ಚೆನ್ನಾಗಿ ಮೂಡಿಬಂದಿದೆ ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ಅಭಯ ಚಂದ್ರ ಜೈನ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಮಂಜುಳಾ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಅಧ್ಯಕ್ಷ ಭಾಸ್ಕರ ದೇವಾಡಿಗ, ಕಾಪು ತಾಲೂಕು ತಹಶಿಲ್ದಾರ್ ಪ್ರತಿಭಾ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಮತ್ತಿತರರು ಉಪಸ್ಥಿತರಿದ್ದರು.







