ಮಂಗಳೂರು: ಶಕ್ತಿ ಯೋಜನೆಯ ಸಂಭ್ರಮ ಆಚರಣೆ

ಮಂಗಳೂರು, ಜು.14: ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್ ಪ್ರಯಾಣಿಸುವ ಶಕ್ತಿ ಯೋಜನೆಯ ಹೊಸ ಮೈಲಿಗಲ್ಲು ತಲುಪಿದೆ. 500 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿ ಹೊಸ ದಾಖಲೆ ತಲುಪಿದೆ. ಆ ಹಿನ್ನೆಲೆಯಲ್ಲಿ ಸೋಮವಾರ ಮಂಗಳೂರು ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಬಸ್‌ಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಮಹಿಳಾ ಪ್ರಯಾಣಿಕರಿಗೆ ಸಿಹಿ ಮತ್ತು ಹೂ ಹಂಚಲಾಯಿತು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಮಹಿಳಾ ಸ್ವಾವಲಂಬನೆ ಮತ್ತು ನಾರಿ ಶಕ್ತಿಯನ್ನು ಎತ್ತಿ ಹಿಡಿಯುವಲ್ಲಿ ಶಕ್ತಿ ಯೋಜನೆಯು ಜಗತ್ತಿನ ಮಾದರಿ ಯೋಜನೆಯಾಗಿದೆ. ಈ ಮೂಲಕ ಮಹಿಳೆಯರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿ ಅವರ ಪರಾವಲಂಬನೆಯನ್ನು ತಪ್ಪಿಸಿದೆ. ಇದರಿಂದ ರಾಜ್ಯದ ಹಲವಾರು ಕುಟುಂಬಗಳ ಸ್ಥಿತಿ ಉತ್ತಮಗೊಂಡು ಮಹಿಳೆಯರು ಧಾರ್ಮಿಕ, ಪ್ರವಾಸ ಮತ್ತು ಕೆಲಸದ ಸ್ಥಳಗಳಿಗೆ ನೆಮ್ಮದಿಯಿಂದ ಸಂಚರಿಸಬಹುದಾಗಿದೆ ಎಂದರು.
ಈ ಸಂದರ್ಭ ಮಂಗಳೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಮುಲ್ಕಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಲ್ವಿನ್ ಕುಟಿನೋ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಹರೀಶ್ ಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಪದ್ಮರಾಜ್, ಶಶಿಧರ ಹೆಗ್ಡೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಲೆಸ್ಟರ್ ಕುನ್ಹಾ, ಶಾಂತಲಾ ಗಟ್ಟಿ, ತಾಲೂಕು ಸಮಿತಿ ಸದಸ್ಯರಾದ ನೀತಾ, ವಿದ್ಯಾ, ಜಯಂತಿ, ರಿತೇಶ್, ನವಾಜ್, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.







