ಹೃದಯಾಘಾತ ಪ್ರಕರಣಗಳ ಏರಿಕೆ| ಮುನ್ನೆಚ್ಚರಿಕೆ ಮತ್ತು ತಪಾಸಣೆ ಅಗತ್ಯ: ಡಾ. ಯೂಸುಫ್ ಕುಂಬ್ಳೆ

ಮಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಹಠಾತ್ ಹೃದಯಾಘಾತಗಳಿಂದ ಯುವ ಜನರಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಜಾಗೃತಿ ಮತ್ತು ಮುನ್ನೆಚ್ಚರಿಕೆ ಅಗತ್ಯ ಎಂದು ಹೃದಯ ತಜ್ಞ, ಮಂಗಳೂರು ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಹೇಳಿದರು.
ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಹೃದಯಾಘಾತ ಪ್ರಕರಣ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದರು.
ಆರೋಗ್ಯವಾಗಿರುವಂತೆ ಕಾಣುತ್ತಿದ್ದ ಅನೇಕರು ಏಕಾಏಕಿ ಸಾವನ್ನಪ್ಪುತ್ತಿರುವುದು ಆತಂಕಕಾರಿ. ಬದ ಲಾದ ಜೀವನ ಪದ್ಧತಿಯಿಂದಾಗಿ ಯುವ ಸಮುದಾಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗು ತ್ತಿದೆ. ದೈಹಿಕ ಚಟುವಟಿಕೆಗಳು, ವ್ಯಾಯಾಮದ ಕೊರತೆ ಇಂದು ಅತಿಯಾಗಿ ಕಾಡುತ್ತಿದೆ ಎಂದು ಹೇಳಿದ ಅವರು, ಶಾಲೆ ಕಾಲೇಜುಗಳಲ್ಲಿ ದೈಹಿಕ ಚಟುವಟಿಕೆಗಳಿಗೆ ಆಧ್ಯತೆ ನೀಡಬೇಕು. ಸೈಕ್ಲಿಂಗ್ ನಡೆಸುವ ವರಿಗೆ ಪ್ರತ್ಯೇಕ ಟ್ರ್ಯಾಕ್ ನಿರ್ಮಿಸಿ ಆರೋಗ್ಯ ಕಾಯ್ದುಕೊಳ್ಳಲು ಸರಕಾರವೇ ಕ್ರಮ ವಹಿಸಬೇಕು ಎಂದರು.
ಫಾಸ್ಟ್ ಫುಡ್ ಸೇವನೆಯು ತೀವ್ರವಾಗಿ ಹೆಚ್ಚಾಗಿದ್ದು, ಇದರಲ್ಲಿ, ಕೃತಕ ಪದಾರ್ಥಗಳು ಇದ್ದು ಆರೋಗ್ಯಕ್ಕೆ ಹಾನಿಕಾರಕವಾಗುತ್ತವೆ. ಮನೆಯ ಅಡುಗೆಗೆ ಹೆಚ್ಚಿನ ಆದ್ಯತೆೆ ನೀಡಬೇಕು. ಅತಿಯಾದ ಎಣ್ಣೆ ಪದಾರ್ಥ ಸೇವನೆಯೂ ಕೂಡ ಅಪಾಯಕಾರಿ. ಮೀನು ಸೇವನೆ ಹೃದಯದ ಆರೋಗ್ಯಕ್ಕೆ ಸೂಕ್ತವಾಗಿದೆ ಎಂದರು.
ಧೂಮಪಾನ, ಮದ್ಯಪಾನ, ಮಾದಕ ವಸ್ತು ಸೇವನೆ, ಕೆಲಸದ ಒತ್ತಡ, ವೈಯಕ್ತಿಕ ಜೀವನದ ಉದ್ವಿಗ್ನತೆ, ಶುಗರ್, ರಕ್ತದೊತ್ತಡ, ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಕುಟುಂಬದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಎಚ್ಚರಿಕೆ ವಹಿಸಬೇಕು. ನಿಯಮಿತ ವ್ಯಾಯಾಮದೊಂದಿಗೆ ಸಮಗ್ರ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ, ಕ್ರಿಯಾಟಿನಿನ್, ಲಿಪಿಡ್‌ಪ್ರೊಫೈಲ್, ಇಸಿಜಿ, ಎಕೋಕಾರ್ಡಿಯೋಗ್ರಾಂ, ಟ್ರೆಡ್‌ಮಿಲ್ ಟೆಸ್ಟ್ ನಡೆಸಬೇಕು ಎಂದರು.
‘ಲವ್ ಯೂವರ್ ಹಾರ್ಟ್’ ವಿಶೇಷ ಪ್ಯಾಕೇಜ್
ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ್‌ಚಂದ್ರನ್ ಮಾತನಾಡಿ, ಮಂಗಳೂರು ಇಂಡಿಯಾನಾ ಆಸ್ಪತ್ರೆಯು ಜನರಲ್ಲಿ ಹೃದಯದ ಜಾಗೃತಿ ಮೂಡಿಸಲು ‘ಲವ್ ಯೂವರ್ ಹಾರ್ಟ್’ ಪ್ಯಾಕೇಜ್ ಜಾರಿಗೊಳಿಸಿದೆ. 1999ರೂ.ಗೆ ಹೃದಯಕ್ಕೆ ಸಂಬಂಧಿಸಿದ ಸಮಗ್ರ ತಪಾಸಣೆ ನಡೆಸಲಾ ಗುತ್ತದೆ ಎಂದರು. ಜು. 15ರಿಂದ 31ರವರೆಗೆ ವಿಶೇಷ ಕೊಡುಗೆ ಲಭ್ಯವಿದೆ ಎಂದರು.
"ಇಂದಿನ ಯುವಜನತೆ ನಿದ್ರೆಯ ಕೊರತೆ ಎದುರಿಸುತ್ತಿದೆ. ಯುವಕರು ತಡ ರಾತ್ರಿಯ ವರೆಗೆ ಮೊಬೈಲ್ ಬಳಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯು ಕಾರಣದಿಂದಾಗಿ ನಿದ್ರೆಯ ಕೊರತೆ ಯಾಗುತ್ತಿದೆ. ನಿದ್ರಾಹೀನತೆಯೂ ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬಿರುತ್ತದೆ. ಇದರೊಂದಿಗೆ ಎಸಿ ಹಾಗೂ ಕೃತಕ ಪರಿಸರದಲ್ಲಿ ದಿನಕಳೆಯುತ್ತಿರುವವರು ನೀರಿನ ಅವಶ್ಯಕತೆಯ ಅರಿವಿಲ್ಲದೆ ಕಡಿಮೆ ನೀರು ಸೇವಿಸುತ್ತಿದ್ದಾರೆ. ಇದು ರಕ್ತದ ಹೆಪ್ಪುಗಟ್ಟುವಿಕೆಯನ್ನು ಉಂಟುಮಾಡಿ ಹೃದಯಾಘಾತ ಅಥವಾ ಸ್ತಂಭನಕ್ಕೆ ಕಾರಣವಾಗಬಹುದು".
-ಡಾ. ಯೂಸುಫ್ ಕುಂಬ್ಳೆ, ವ್ಯವಸ್ಥಾಪಕ ನಿರ್ದೇಶಕ, ಇಂಡಿಯಾನಾ ಆಸ್ಪತ್ರೆ.







