ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿ ಕರಾವಳಿ ಮರಳು ನೀತಿ ಜಾರಿಗೆ ಬರಲಿ: ವಸಂತ ಆಚಾರಿ

ಕೊಣಾಜೆ: ಒಂದು ತಿಂಗಳಿಂದ ಮರಳು ಮತ್ತು ಕೆಂಪು ಕಲ್ಲು ನಿಷೇಧದಿಂದ ಜಿಲ್ಲೆಯ ಯಾವುದೇ ನಿರ್ಮಾಣ ಯೋಜನೆಗಳು ನಡೆಯದೆ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಇಂತಹ ಅಕ್ರಮ ಮರಳುಗಾರಿಕೆಗೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಆರಂಭ ದೊರೆಯಿತು. ಅಕ್ರಮ ದಂಧೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿಗರ ಸಮಾನ ಪಾಲು ಇದೆ. ಕಾರ್ಮಿಕರು ಕೆಲಸವಿಲ್ಲದೆ ಜೀವನ ನಿರ್ವಹಿಸಲಾಗದೆ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಪೇಡರೇಶನ್ ನ ಜಿಲ್ಲೆಯ ಅಧ್ಯಕ್ಷರಾದ ವಸಂತ ಆಚಾರಿ ಅವರು ಹೇಳಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ನಾಟೆಕಲ್ ನಲ್ಲಿರುವ ತಾಲೂಕು ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೆಂಪುಕಲ್ಲು ಮತ್ತು ಮರಳು ಅಭಾವದ ಈ ಪರಿಸ್ಥಿತಿಗೆ ಇಲ್ಲಿನ ಬಿಜೆಪಿಯ ಸಂಸದರು ಮತ್ತು ಶಾಸಕರು ನೇರ ಹೊಣೆಯಾಗಿದ್ದಾರೆ. ಕಳೆದ ಹಲವು ಮೂರು ದಶಕಗಳಿಂದ ಜಿಲ್ಲೆಯಿಂದ ಗೆದ್ದು ಹೋದಂತಹ ಸಂಸದರು ಎಂಎಲ್ಎಗಳು ಇದರ ಬಗ್ಗೆ ಇಷ್ಟರವರೆಗೆ ಚಕಾರವೆತ್ತುತ್ತಿಲ್ಲ. ಆದ್ದರಿಂದ ಅವರಿಗೆ ಇದನ್ನು ಪ್ರತಿಭಟಿಸುವ ಯಾವುದೇ ನೈತಿಕತೆ ಇಲ್ಲ ಎಂದರು. ಇಂತಹ ಬೆಳವಣಿಗೆಗಳಿಂದ ಜಿಲ್ಲೆಯ ಲಕ್ಷಕ್ಕೂ ಮಿಕ್ಕಿದ ಕಾರ್ಮಿಕರು ಕೆಲಸವಿಲ್ಲದೆ ಪರಿತಪಿಸುತ್ತಿದ್ದಾರೆ. ಅಂತಹ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ರೂಪಾಯಿ 10,000 ಪರಿಹಾರ ಧನ ನೀಡಬೇಕೆಂದು ಅವರು ಹೇಳಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾರ್ ಮಾತನಾಡಿ, ಜಿಲ್ಲೆಯಲ್ಲಿ ಅವ್ಯಾವತವಾಗಿ ಅಡೆತಡೆ ಇಲ್ಲದೆ ನಡೆಯುತ್ತಿದ್ದ ಅಕ್ರಮ ದಂಧೆಗಳಿಗೆ ಈಗ ಅಧಿಕಾರವಹಿಸಿಕೊಂಡಿರುವ ದಕ್ಷ ಮತ್ತು ನಿಷ್ಠಾವಂತ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಿರುವ ಕಾರಣ ಮರಳು ಮತ್ತು ಕೆಂಪು ಕಲ್ಲು ಅಭಾವ ಉಂಟಾಗಿದೆ. ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯೂ ಅಕ್ರಮವಾಗಿ ಅನೇಕ ವರ್ಷಗಳಿಂದ ನಡೆಯುತ್ತಲೇ ಇದೆ ಇದೊಂದು ಪ್ರಬಲ ಮಾಫಿಯವಾಗಿದೆ . ಇದರ ನಿಯಂತ್ರಣ ಅಗತ್ಯವಾಗಿ ಆಗಬೇಕಿದೆ. ಆದರೆ ಇಂತಹ ದಿಡೀರ್ ಕ್ರಮಗಳನ್ನು ಕೈಗೊಳ್ಳುವಾಗ ದೂರ ದೃಷ್ಟಿಯ ಯೋಜನೆಯನ್ನು ಹಮ್ಮಿಕೊಂಡಿದ್ದರೆ ಒಳ್ಳೆಯದು. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಕಾಮಗಾರಿಗಳು ಸರಾಗವಾಗಿ ನಡೆಯುವಂತೆ ಕಾರ್ಮಿಕರ ಉದ್ಯೋಗ ನಷ್ಟವಾಗದಂತೆ ಸರಳವಾಗಿ ಕಚ್ಚಾ ವಸ್ತುಗಳು ಪೂರೈಕೆ ಮಾಡಲು ಸಾಧ್ಯವಾಗಬೇಕು ಎಂದರು.
ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಸುಕುಮಾರ್ ತೊಕ್ಕೊಟ್ಟು, ಕಟ್ಟಡ ಕಾರ್ಮಿಕರ ಸಂಘಟನೆಯ ಉಳ್ಳಾಲ ತಾಲೂಕು ಅಧ್ಯಕ್ಷರಾದ ಜನಾರ್ಧನ ಕುತ್ತಾರು ಮಾತನಾಡಿದರು.
ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್ , ಶೇಕರ್ ಕುಂದರ್, ತಾಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ ಉಪಸ್ಥಿತದ್ದರು. ಸಭೆ ನೇತೃತ್ವವನ್ನು ಇಬ್ರಾಹಿಂ ಮದಕ, ಜಯಂತ ನಾಯಕ್, ನವೀನ್ ಗಿರಿಯ ಮೂಲೆ, ಸುಧಾಕರ್ ಆಳ್ವಾ. ಮುಂತಾದವರು ವಹಿಸಿದ್ದರು. ರೋಹಿದಾಸ್ ಭಟ್ನಗರ ಸ್ವಾಗತಿಸಿ, ನಿರೂಪಿಸಿದರು , ರಾಮಚಂದ್ರ ಪಜೀರ್ ವಂದಿಸಿದರು.







