ದ.ಕ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಮಂಗಳೂರು, ಜು.15: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ. ಮುಂದಿನ ಕೆಲವು ದಿನಗಳ ಕಾಲ ಮಳೆ ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಬುಧವಾರ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಸೊಮವಾರ ತಡರಾತ್ರಿಯಿಂದಲೇ ಮಳೆ ಸುರಿಯತೊಡಗಿದ್ದು, ಮಂಗಳವಾರ ನಿರಂತರವಾಗಿ ಮಳೆ ಸುರಿದಿದೆ. ವಿಪರೀತ ಮಳೆಯ ಹಿನ್ನೆಲೆಯಲ್ಲಿ ಬಂಟ್ವಾಳ, ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಅಂಗನ ವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗೆ ರಜೆ ನೀಡಲಾಗಿತ್ತು.
ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಹರಿದ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು.
*ದ.ಕ ಜಿಲ್ಲೆಯಲ್ಲಿ 54.2 ಮಿ.ಮೀ ಮಳೆಯಾಗಿದೆ. ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿದೆ. ಜಿಲ್ಲೆಯಲ್ಲಿ 10ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಮಂಗಳೂರು ಮನಪಾ ವ್ಯಾಪ್ತಿಯಲ್ಲಿ 8ಕ್ಕೂ ಅಧಿಕ ಆವರಣ ಗೋಡೆಗಳು ಕುಸಿದಿರುವುದಾಗಿ ವರದಿಯಾಗಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ 30ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಕಡಲು ಪ್ರಕ್ಷುಬ್ಧವಾಗಿರುವ ಕಾರಣ ಮುಂದಿನ ನಾಲ್ಕೈದು ದಿನಗಳ ಕಾಲ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.
*ಮಂಗಳೂರಿನಲ್ಲೇ ಹೆಚ್ಚು ಮಳೆ
ಜಿಲ್ಲೆಯಲ್ಲಿ 24 ಗಂಟೆಯಲ್ಲಿ ಬಿದ್ದ ಮಳೆಯಲ್ಲಿ 92.1 ಮಿ.ಮೀ ಮಳೆ ಮಂಗಳೂರಿನಲ್ಲೇ ಸುರಿದಿದೆ. ಉಳಿದಂತೆ ಮೂಡುಬಿದಿರೆಯಲ್ಲಿ 77.4 ಮಿ.ಮೀ, ಉಳ್ಳಾಲದಲ್ಲಿ 75.3 ಮಿ.ಮೀ, ಬೆಳ್ತಂಗಡಿಯಲ್ಲಿ 39.9 ಮಿ.ಮೀ, ಬಂಟ್ವಾಳದಲ್ಲಿ 65.8 ಮಿ.ಮೀ, ಪುತ್ತೂರಿನಲ್ಲಿ 46.5 ಮಿ.ಮೀ, ಸುಳ್ಯದಲ್ಲಿ 49.1 ಮಿ.ಮೀ, ಕಡಬದಲ್ಲಿ 45.1 ಮಿ.ಮೀ, ಮೂಲ್ಕಿಯಲ್ಲಿ 65.5 ಮಿ.ಮೀ ಮಳೆ ಸುರಿದಿದೆ.







