ನನಗೆ ಇನ್ನು ಏನೂ ಉಳಿದಿಲ್ಲ. ಮಗಳು ಮೃತಪಟ್ಟಿದ್ದರೆ ಆಕೆಯ ಅಸ್ಥಿಯಾದರೂ ಸಿಕ್ಕರೆ ಸಾಕು: ಸುಜಾತಾ ಭಟ್
22 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದರೆನ್ನಲಾದ ಅನನ್ಯಾ ಭಟ್ ತಾಯಿಯ ಕೋರಿಕೆ

ಸುಜಾತಾ ಭಟ್
ಮಂಗಳೂರು: ‘ನನಗೆ ಯಾರೂ ಇಲ್ಲ. ಸುಮಾರು 22 ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆಂದು ಹೋಗಿದ್ದ ಮಗಳು ಇನ್ನೂ ತಿರುಗಿ ಬಂದಿಲ್ಲ. ಅವಳ ಕೊರಗಿನಲ್ಲೇ ಇಷ್ಟು ವರ್ಷ ಕಳೆದೆ. ಸಾಯುವುದಕ್ಕಿಂತ ಮೊದಲು ಮಗಳ ಅಸ್ಥಿಯಾದರೂ ದೊರೆತರೆ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಬೇಕಿದೆ. ಅದೇ ಆಲೋಚನೆಯಲ್ಲಿ ಹೊರಟಿರುವೆನು’ ಎಂದು ಸುಜಾತಾ ಭಟ್ ಹೇಳಿಕೊಂಡಿದ್ದಾರೆ.
ಇಪ್ಪತ್ತೆರಡು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದರೆನ್ನಲಾದ ಮಣಿಪಾಲದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಅನನ್ಯಾ ಭಟ್(20) ಎಂಬವರ ತಾಯಿ ಸುಜಾತಾ ಭಟ್ ಮಂಗಳವಾರ ತನ್ನ ವಕೀಲರೊಂದಿಗೆ ಆಗಮಿಸಿ ಮಗಳ ನಿಗೂಢ ನಾಪತ್ತೆ ಪ್ರಕರಣದಲ್ಲಿ ನ್ಯಾಯ ಒದಗಿಸಿಕೊಡುವಂತೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
‘‘ಅಂದು ಮಗಳ ನಾಪತ್ತೆ ಪ್ರಕರಣದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೂ, ನನ್ನ ದೂರನ್ನು ಸ್ವೀಕರಿಸಲಿಲ್ಲ. ಮಗಳು ಎಲ್ಲೋ, ಯಾರೊಂದಿಗಾದರೂ ಹೋಗಿರಬಹುದು ಎಂದು ಹೇಳಿ ನನ್ನನ್ನು ವಾಪಸ್ ಕಳುಹಿಸಿದ್ದರು. ಮಗಳು ಇಷ್ಟರವರೆಗೆ ತಿರುಗಿ ಬರಲೇ ಇಲ್ಲ. ಅವಳು ನಿಗೂಢವಾಗಿ ನಾಪತ್ತೆಯಾದ ಕೊರಗಿನಿಂದ ಇಷ್ಟು ವರ್ಷ ಕಳೆದಿರುವೆನು. ಪತಿ ತೀರಿ ಹೋದ ಬಳಿಕ ನನಗೆ ಮಗಳು ಅನನ್ಯಾ ಆಸರೆಯಾಗಿದ್ದಳು. ಆದರೆ ಅವಳು ಇವತ್ತು ನನ್ನೊಂದಿಗಿಲ್ಲ. ಇತ್ತೀಚೆಗೆ ವ್ಯಕ್ತಿಯೊಬ್ಬನು ಧರ್ಮಸ್ಥಳದಲ್ಲಿ ಅನಾಥ ಮೃತದೇಹಗಳ ವಿಲೇವಾರಿ ಮಾಡಿರುವ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿದೆ. ಈ ಹಿನ್ನೆಲೆಯಲ್ಲಿ ನನ್ನ ಮಗಳ ಬಗ್ಗೆಯೂ ಏನಾದರೂ ಮಾಹಿತಿ ಸಿಗಬಹುದೇ ಎಂಬ ಆಸೆ ಉಂಟಾಯಿತು. ನಾನು ಈ ಬಗ್ಗೆ ಹೈಕೋರ್ಟ್ ವಕೀಲರಾದ ಮಂಜುನಾಥ್ ಎನ್. ಅವರನ್ನು ಸಂಪರ್ಕಿಸಿದೆ. ಅವರು ಒಪ್ಪಿಕೊಂಡರು. ಅವರೊಂದಿಗೆ ಆಗಮಿಸಿ ದ.ಕ. ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ" ಎಂದು 60 ವರ್ಷ ವಯಸ್ಸಿನ ಸುಜಾತಾ ಭಟ್ ಹೇಳಿದರು.
"ನನಗೆ ಇನ್ನು ಏನೂ ಉಳಿದಿಲ್ಲ. ಬದುಕಿನ ಕೊನೆಯ ಆಸೆ ಇಷ್ಟೇ. ಮಗಳು ಮೃತಪಟ್ಟಿದ್ದರೆ, ಆಕೆಯ ಅಸ್ಥಿಯಾದರೂ ಸಿಕ್ಕರೆ ಸಾಕು. ನಾನು ಹಿಂದೂ ಧರ್ಮದ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ನೆರವೇರಿಸುತ್ತೇನೆ’’ ಎಂದು ಅವರು ಗದ್ಗದಿತರಾದರು.
"ಹಿಂದೆ ಬೆಳ್ತಂಗಡಿ ಪೊಲೀಸರು ಸುಜಾತಾ ಭಟ್ ಅವರ ದೂರನ್ನು ಸ್ವೀಕರಿಸಲಿಲ್ಲವಂತೆ. ಇದೀಗ ತುಂಬಾ ವರ್ಷಗಳ ಬಳಿಕ ಮತ್ತೆ ನಾಪತ್ತೆ ಪ್ರಕರಣದ ಬಗ್ಗೆ ದೂರು ನೀಡುವ ಕಾರಣಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿಯಾಗಿದ್ದೇವೆ. ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್. ತಿಳಿಸಿದರು.
2003ರಲ್ಲಿ ಮಣಿಪಾಲದ ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಅನನ್ಯಾ ಭಟ್ ಆ ಸಂದರ್ಭ ಸ್ನೇಹಿತೆಯರೊಂದಿಗೆ ಧರ್ಮಸ್ಥಳ ಶ್ರೀ ಕ್ಷೇತ್ರ ಸಂದರ್ಶಿಸುವುದಾಗಿ ತಾಯಿಗೆ ಹೇಳಿ ತೆರಳಿದ್ದವರು ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು.







