ನವೆಂಬರ್ ಒಳಗಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಗಾಲಿ ಜನಾರ್ದನ ರೆಡ್ಡಿ ಭವಿಷ್ಯ

ಪುತ್ತೂರು: ದೇವರಾಜ ಅರಸು ಅವರಿಗಿಂತ ಒಂದು ದಿನವಾದರೂ ಹೆಚ್ಚು ಆಡಳಿತ ಮಾಡಬೇಕು ಎಂಬ ಜಿದ್ದಿಗೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ನವೆಂಬರ್ ತಿಂಗಳ ಒಳಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡದಿದ್ದಲ್ಲಿ ಡಿಕೆಸಿ ಸಿಎಂ ಕುರ್ಚಿ ಯನ್ನು ಬಲವಂತವಾಗಿ ಎಳೆದುಕೊಳ್ಳುತ್ತಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.
ಅವರು ಬುಧವಾರ ಕಡಬ ತಾಲೂಕಿನ ಸವಣೂರು ಗ್ರಾಮದ ಆರೆಲ್ತಡಿ ಉಳ್ಳಾಕ್ಲು, ಕೆಡೆಂಜೊಡಿತ್ತಾಯ ದೈವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸಭಾಭವನದ ಶಿಲನ್ಯಾಸ ನೆರವೇರಿಸಿ ಬಳಿಕ ಮಾಜಿ ಸಂಸದ ನಳಿಕುಮಾರ್ ಕಟೀಲ್ ಅವರ ಪಾಲ್ತಾಡಿಯ ಕುಂಜಾಡಿಯಲ್ಲಿನ ಮನೆಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದರು.
ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು 50-50 ಅಧಿಕಾರ ಹಂಚಿಕೆಯನ್ನು ಮಾಡಿಕೊಂಡಿದ್ದಾರೆ ಎಂದು ನಾನು ಸಂಡೂರಿನಲ್ಲಿ ನಡೆದ ಉಪಚುನಾವಣೆಯ ಸಂದರ್ಭದಲ್ಲಿಯೇ ಹೇಳಿದ್ದೆ. ಅದೀಗ ನಿಜವಾಗುತ್ತಿದೆ. ಡಿಕೆಶಿ ಈಗಾಗಲೇ ಸಿಎಂ ಕುರ್ಚಿಗೆ ಬುನಾದಿ ಹಾಕಲು ಶುರು ಮಾಡಿದ್ದಾರೆ. ನನಗೆ ತಿಳಿದ ಮಾಹಿತಿ ಪ್ರಕಾರ ಅಧಿಕಾರ ಪಡೆಯಲೇಬೇಕು ಎನ್ನುವ ಆತುರದಲ್ಲಿ ಡಿಕೆಶಿ ಇದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ. ರಾಜ್ಯದಲ್ಲಿ ಅತೀಹೆಚ್ಚು ದಿನಗಳ ಕಾಲ ಆಡಳಿತ ಮಾಡಿದವರು ದೇವರಾಜ ಅರಸು. ಅವರಿಗಿಂತ ಒಂದು ದಿನ ಹೆಚ್ಚು ಆಡಳಿತ ಮಾಡಿದ ಮೇಲೆ ನಾನು ಸೀಟು ಬಿಟ್ಟು ಕೊಡುತ್ತೇನೆ ಎಂದು ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಅವರು ಒಪ್ಪಂದ ಮಾಡಿಕೊಂಡಿದ್ದರು. ಹೆಚ್ಚು ಅಧಿಕಾರ ನಡೆಸಿ ದೇವರಾಜ ಅವರಸು ಅವರ ದಾಖಲೆ ಮುರಿಯಬೇಕು ಎನ್ನುವ ಜಿದ್ದಿಗೆ ಬಿದ್ದಿರುವ ಮುಖ್ಯಮಂತ್ರಿಯವರು ದಾಖಲೆ ಮುರಿದ ಬಳಿಕ ಕುರ್ಚಿ ಬಿಟ್ಟುಕೊಡಲಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವುದಿಲ್ಲ ಎಂದು ತಿಳಿದು ಡಿಕೆಶಿ ತಮ್ಮ ಹಕ್ಕು ಪ್ರತಿಪಾದನೆ ಶುರುವಿಟ್ಟು ಕೊಂಡಿದ್ದಾರೆ. ಅವರಲ್ಲಿ ಇದೀಗ ಗೊಂದಲ ಉಂಟಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕುಂಠಿತವಾಗಿದ್ದು, ಕಲ್ಯಾಣ ಕರ್ನಾಟದ ಭಾಗಕ್ಕೆ ವಿಶೇಷ ಅನುದಾನದ ನೆಲೆಯಲ್ಲಿ ನಮ್ಮ ಶಾಸಕರಿಗೆ ಒಂದಷ್ಟು ಅನುದಾನ ದೊರೆಯುತ್ತದೆ. ಆದರೆ ರಾಜ್ಯದ ಉಳಿದ ಭಾಗದ ಶಾಸಕರಿಗೆ ಯಾವುದೇ ಅನುದಾನ ಸಿಗುತ್ತಿಲ್ಲ. ಇವತ್ತು ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಜನರಿಗೆ ಬೆಲೆ ಏರಿಕೆಯ ಶಿಕ್ಷೆಯನ್ನು ನೀಡಲಾಗುತ್ತಿದೆ. ಗ್ಯಾರಂಟಿಯನ್ನೂ ಸರಿಯಾಗಿ ಕೊಡು ತ್ತಿಲ್ಲ. ಗ್ರಹಲಕ್ಷ್ಮಿ ದುಡ್ಡು ಕೊಡದೆ ನಾಲ್ಕು ತಿಂಗಳು ಆಗಿದೆ. ಯಾವುದಾದರೂ ಒಂದು ಚುನಾವಣೆ ಬಂದರೆ ಒಂದು ಕಂತು ಹಾಕುತ್ತಾರೆ. ಇದರಿಂದಾಗಿ ರಾಜ್ಯ ಕಾಂಗ್ರೆಸ್ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಕಾಂಗ್ರೆಸ್ ಸರಕಾರದ ದುರಾಡಳಿತವನ್ನು ನೋಡಿರುವ ರಾಜ್ಯದ ಜನತೆ ಬಿಜೆಪಿಗೆ ಮತ ನೀಡಲು ತುದಿ ಗಾಲಲ್ಲಿ ನಿಂತಿದ್ದಾರೆ. ಮುಂದಿನ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಒಳ್ಳೆಯ ಬಹುಮತದೊಂದಿಗೆ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ. ಪಕ್ಷದ ನಿರ್ದೆಶನದಂತೆ ನಾವೆಲ್ಲಾ ಒಟ್ಟಾಗಿ ಪಕ್ಷವನ್ನು ಕಟ್ಟಿ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಬಹುಮತ ಪಡೆಯುತ್ತೇವೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ದಿನೇಶ್ ಮೆದು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮತ್ತಿತರರು ಉಪಸ್ಥಿತರಿದ್ದರು.







