ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಕರೆ ಮಾಡಿ ಮಹಿಳೆಗೆ ವಂಚನೆ: ಮಂಗಳೂರು ಸೆನ್ ಠಾಣೆಗೆ ದೂರು

ಮಂಗಳೂರು: ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಫೋನ್ ಕರೆ ಮಾಡಿ ಮಹಿಳೆಯನ್ನು ಬೆದರಿಸಿ ಹಂತ ಹಂತವಾಗಿ 61.15 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಜೂ.19ರಂದು ಬೆಳಗ್ಗೆ ತನಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು ಮುಂಬೈಯ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿ ಸಂದೀಪ್ ಎನ್ನುತ್ತಾ ಇಂಗ್ಲಿಷ್‌ನಲ್ಲಿ ಮಾತನಾಡಿದ. ‘ನಿಮ್ಮ ಗುರುತಿನ ಚೀಟಿ ಬಳಸಿ ಯಾರೋ ಮಾನವ ಕಳ್ಳಸಾಗಣೆ, ಡ್ರಗ್ಸ್ ದಂಧೆ ಮೊದಲಾದ ಅಕ್ರಮ ಚಟುವಟಿಕೆ ನಡೆಸುತ್ತಿದ್ದು ಇದಕ್ಕೆ ಕೆನರಾ ಬ್ಯಾಂಕ್ ಖಾತೆ ಬಳಸಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದಾರೆ. ನಿಮ್ಮನ್ನು ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸುತ್ತೇವೆ. ನೀವು ಹಣ ನೀಡಬೇಕು. ಈ ವಿಷಯ ಯಾರಿಗೂ ತಿಳಿಸಬಾರದು’ ಎಂದು ಬೆದರಿಸಿದ. ಇದರಿಂದ ತಾನು ಭಯಗೊಂಡೆ. ಆ ದಿನ ಮಧ್ಯಾಹ್ನ ಮತ್ತೊಮ್ಮೆ ಕರೆ ಮಾಡಿದ ವ್ಯಕ್ತಿ ‘ಈ ವಿಷಯವನ್ನು ಪತಿ ಹಾಗೂ ಇತರರಿಗೆ ತಿಳಿಸಿದರೆ ಪತಿಯ ಕೆಲಸ ತೆಗೆಸುತ್ತೇವೆ’ ಎಂದು ಭಯ ಹುಟ್ಟಿಸಿದ. ಮರುದಿನ ಮೋಹಿತ್ ಕುಮಾರ್ ಎಂಬಾತ ವಾಟ್ಸ್‌ಆ್ಯಪ್ ಕರೆ ಮಾಡಿ ಆ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿ ತನ್ನ ವೈಯಕ್ತಿಕ ವಿವರ, ಪಾನ್‌ಕಾರ್ಡ್, ಬ್ಯಾಂಕ್ ಖಾತೆಯ ವಿವರ ಪಡೆದು ಹಣ ವರ್ಗಾಯಿಸುವಂತೆ ಒತ್ತಾಯಿಸಿದ. ಅದರಂತೆ ತಾನು ಜೂ.21ರಿಂದ ಜು.9ರವರೆಗೆ ಹಂತ ಹಂತವಾಗಿ 61,15,050 ರೂ.ಗಳನ್ನು ಅಪರಿಚಿತ ವ್ಯಕ್ತಿ ನೀಡಿದ ಬೇರೆ ಬೇರೆ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದೇನೆ. ನಂತರವೂ ಹೆಚ್ಚು ಹಣ ವರ್ಗಾಯಿಸುವಂತೆ ಆರೋಪಿಗಳು ಹೇಳಿದಾಗ ತಾನು ತನ್ನ ಪತಿ ಮತ್ತು ಮಕ್ಕಳಿಗೆ ವಿಚಾರ ತಿಳಿಸಿದೆ ಎಂದು ಮಂಗಳೂರು ಸೆನ್ ಠಾಣೆಯ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.





