ಹಿಂದೂ ಜಾಗರಣ ವೇದಿಕೆಯ ಸಮಿತ್ರಾಜ್ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಶಾಸಕ ಉಮಾನಾಥ ಕೋಟ್ಯಾನ್

ಉಮಾನಾಥ ಕೋಟ್ಯಾನ್
ಮೂಡುಬಿದಿರೆ, ಜು.17: ಸಾರ್ವಜನಿಕರು ತಲೆತಗ್ಗಿಸುವಂತಹ ಕೆಲಸವನ್ನು ನಾನು ಯಾವತ್ತೂ ಮಾಡಿಲ್ಲ. ಆದರೆ ಕಾಂಗ್ರೆಸ್ನ ಕೆಲವು ಮುಖಂಡರು ನನಗೆ ಸಂಬಂಧವಿಲ್ಲದ ಸಮಿತ್ರಾಜ್ ಪ್ರಕರಣವನ್ನು ಮುಂದಿಟ್ಟುಕೊಂಡು ನನ್ನ ತೇಜೋವಧೆ ಮಾಡುತ್ತಿರುವುದು ಖಂಡನೀಯ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.
ಗುರುವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ಜಾಗರಣ ವೇದಿಕೆಯ ಸಮಿತ್ರಾಜ್ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಅವರ ಮೊಬೈಲನ್ನು ಪೊಲೀಸರು ಪರಿಶೀಲಿಸಲು ಅಥವಾ ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸುವುದಕ್ಕೆ ನಾನು ವಿರೋಧ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಮೂಡುಬಿದಿರೆಯಲ್ಲಿ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ಮಿಥುನ್ ರೈಯ ಮಾತು ಅವರಿಗೆ ಶೋಭೆ ತರುವಂತದ್ದಲ್ಲ. ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ವಾದಾಗ ಅವರ ರಕ್ಷಣೆಗೆ ನಿಲ್ಲಬೇಕಾಗುವುದು ನನ್ನ ಕರ್ತವ್ಯ. ಕಾರ್ಯಕರ್ತರ ವೈಯುಕ್ತಿಕ ತಪ್ಪುಗಳಿಗೆ ನಾನು ಹೊಣೆಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪಕ್ಷದ ಮುಖಂಡರಾದ ಈಶ್ವರ್ ಕಟೀಲು, ರಂಜಿತ್ ಪೂಜಾರಿ, ಶಾಂತಿಪ್ರಸಾದ್ ಹೆಗ್ಡೆ, ಸುನಿಲ್ ಆಳ್ವ, ಲಕ್ಷ್ಮಣ ಪೂಜಾರಿ, ರೈತ ಮೋರ್ಚಾದ ಅಧ್ಯಕ್ಷ ರಾಜೇಶ್ ಉಪಸ್ಥಿತರಿದ್ದರು.







