ಕೊರಗ ಸಂಘಗಳ ನಿಯೋಗದಿಂದ ದ.ಕ. ಜಿಲ್ಲಾಧಿಕಾರಿ ಭೇಟಿ: ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮನವಿ

ಮಂಗಳೂರು, ಜು. 17: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಿಯೋಗವು ಗುರುವಾರ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ನೂತನ ಜಿಲ್ಲಾಧಿಕಾರಿಯವರನ್ನು ಸ್ವಾಗತಿಸಿದ ನಿಯೋಗವು, ಸಮುದಾಯ ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಿದೆ.
ಸಮುದಾಯದ ಪ್ರಮುಖ ಬೇಡಿಕೆಗಳಾದ ಕೃಷಿ ಯೋಗ್ಯ ಭೂಮಿ ಹಂಚಿಕೆ, ಸಮುದಾಯದ ಪೂರ್ವಿಕರ ಭೂಮಿ ಖಾತೆ ಬದಲಾವಣೆ, ಗ್ರಾ.ಪಂ.ನ ಶೇ. 25ರ ನಿಧಿಯ ಆಯ್ಕೆಯಲ್ಲಿ ಕೊರಗ ಸಮುದಾಯದವರಿಗೆ ಆದ್ಯತೆ, ಅರ್ಧಕ್ಷೆ ಶಿಕ್ಷಣ ಮೊಟಕುಗೊಳಿಸಿದ ಮಕ್ಕಳಿಗೆ ಬ್ರಿಡ್ಜ್ ಕೋರ್ಸ್, ಟ್ಯೂಶನ್ ಸೆಂಟರ್, ಬೇಸಿಗೆ ಶಿಬಿರ ಮತ್ತು ಕ್ರೀಡಾಕೂಟ ಮೊದಲಾದ ಕಾರ್ಯಕ್ರಮಗಳ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಿಕೆ, ಕೊರಗ ಸಮುದಾಯದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರ ಉಪಸ್ಥಿತಿಯಲ್ಲಿ ಜಿಲ್ಲಾ ಮಟ್ಟದ ಕೊರಗರ ಕುಂದುಕೊರತೆ ಸಭೆ ಮತ್ತು ತಾಲೂಕು ಮಟ್ಟದಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಕುಂದು ಕೊರತೆ ಸಭೆ ನಡೆಸುವಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನಿಯೋಗವು ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ಒಕ್ಕೂಟದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಶೀಘ್ರವೇ ಸಮುದಾಯಗಳ ಬೇಡಿಕೆ ಪೂರೈಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ನಿಯೋಗದಲ್ಲಿ ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ, ಸಂಯೋಜಕರಾದ ಕೆ. ಪುತ್ರನ್ ಹೆಬ್ರಿ, ಬೊಗ್ರ ಕೊಕ್ಕರ್ಣೆ, ಶೀನ ಬೆಳ್ಮಣ್, ನರಸಿಂಹ ಪೆರ್ಡೂರು, ಸುಪ್ರಿಯ ಎಸ್. ಕಿನ್ನಿಗೋಳಿ, ಪ್ರೀತಿ ಹೆಬ್ರಿ, ನಾಗಿಣಿ ಶಿಮಂತೂರು, ಆಶಾ ಪಂಜ ಮೊದಲಾದವರು ಉಪಸ್ಥಿತರಿದ್ದರು.





