ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ದ.ಕ. ಜಿಲ್ಲಾಧಿಕಾರಿ ಭೇಟಿ

ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಹಲವು ಕಡೆ ಗುಡ್ಡ ಜರಿತ, ನೆರೆ, ಮನೆ ಕುಸಿತ ಮತ್ತಿತರ ಘಟನೆಗಳು ನಡೆದಿರುವ ಸ್ಥಳಗಳಿಗೆ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು ಗುರುವಾರ ಭೇಟಿ ನೀಡಿದರು.
ಬಿಜೈ ಬಟ್ಟಗುಡ್ಡ, ಆರ್ಯಸಮಾಜ ರಸ್ತೆ, ಪಂಪ್‌ವೆಲ್ , ಮಾಲೆಮಾರ್, ಕಾವೂರು ಉಲ್ಲಾಸ ನಗರ, ಕೊಟ್ಟಾರ ಚೌಕಿ ಮತ್ತಿತರ ಕಡೆ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರು.
ನಗರದ ಸರ್ಕ್ಯೂಟ್ ಹೌಸ್ ಪಕ್ಕದ ಮುಖ್ಯರಸ್ತೆಯಲ್ಲಿ ಗುಡ್ಡ ಕುಸಿತ ಸಂಭವಿಸಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಗಳು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ನಗರದ ವಿವಿಧ ಕಡೆ ಮಳೆಹಾನಿ ಮತ್ತು ನೀರು ನಿಂತ ಸ್ಥಳ ಗಳಿಗೆ ಭೇಟಿ ನೀಡಿದರು. ಪಂಪ್‌ವೆಲ್ ವೃತ್ತಕ್ಕೆ ಭೇಟಿ ನೀಡಿದ ಅವರು ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುವುದನ್ನು ಗಮನಿಸಿ ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಲು ನಗರಪಾಲಿಕೆಗೆ ಸೂಚಿಸಿದರು. ಕೊಟ್ಟಾರ, ಚೌಕಿ, ಕಾವೂರು ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಮಾಧಾನ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿಗಳು ಬಜ್ಪೆ ಸಮೀಪದ ಕೊಂಚಾರು ಎಂಎಸ್‌ಇಝೆಡ್ ಪ್ರದೇಶದಲ್ಲಿ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಇಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಸ್‌ಇಝೆಡ್ ಅಧಿಕಾರಿ ಗಳಿಗೆ ನಿರ್ದೇಶನ ನೀಡಿದರು. ಕೆಂಜಾರು ಕೋಸ್ಟ್‌ಗಾರ್ಡ್ ಕಾದಿರಿಸಿದ ಪ್ರದೇಶದಲ್ಲಿ ನೀರು ನಿಂತ ಸ್ಥಳವನ್ನು ಪರಿಶೀಲಿಸಿದರು. ಮಳೆ ಹಾನಿಯಿಂದ ತೊಂದರೆಗೊಗಳಾದ ಸಂತ್ರಸ್ತರೊಂದಿಗೆ ಜಿಲ್ಲಾಧಿಕಾರಿ ಗಳು ಸಮಾಲೋಚಿಸಿ ಅಗತ್ಯವಿರುವ ಎಲ್ಲಾ ನೆರವು ಮತ್ತು ಪರಿಹಾರವನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಆಯಾ ಪ್ರದೇಶದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ರಸ್ತೆ ಸಂಚಾರಕ್ಕೆ ಅಡಚಣೆಯಾಗಿರುವ ಕಡೆ ತಾತ್ಕಾಲಿಕ ಮತ್ತು ಶಾಶ್ವತ ಕ್ರಮಕೈಗೊಳ್ಳುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ದ.ಕ.ಜಿಲ್ಲಾಧಿಕಾರಿ ಭೇಟಿ ಸಂದರ್ಭದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕರ್ಭಾರಿ , ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್, ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಉಪಸ್ಥಿತರಿದ್ದರು.







