ಧರ್ಮಸ್ಥಳ: ನೇರ್ತನೆ ಪರಿಸರದಲ್ಲಿ ಕಾಡಾನೆ ನುಗ್ಗಿ ಕೃಷಿಗೆ ಹಾನಿ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇರ್ತನೆ ಪರಿಸರದಲ್ಲಿ ಕಾಡಾನೆಗಳು ಪ್ರತಿ ನಿತ್ಯ ತೋಟಗಳಿಗೆ ನುಗ್ಗುತ್ತಿದ್ದು ಕೃಷಿಗೆ ವ್ಯಾಪಕ ಹಾನಿಯುಂಟುಮಾಡುತ್ತಿದೆ.
ಕಳೆದ ಮೂರು ದಿನಗಳಿಂದ ಕಾಡಾನೆಗಳು ಇಲ್ಲಿಯೇ ಬೀಡು ಬಿಟ್ಟಿದ್ದು ಸಂಜೆಯಾದ ಕೂಡಲೇ ತೋಟಗಳಿಗೆ ನುಗ್ಗುತ್ತಿವೆ.
ಗುರುವಾರ ರಾತ್ರಿಯ ವೇಳೆ ಇಲ್ಲಿನ ನಿವಾಸಿ ಟಿ.ವಿ ದೇವಸ್ಯ ಎಂಬವರ ಮನೆಯ ಸಮೀಪಕ್ಕೆ ಬಂದ ಕಾಡಾನೆಗಳು ಇಲ್ಲಿ ಕೃಷಿ ಮಾಡಿದ್ದ ಮರಗೆಣಸಿನ ಗಿಡಗಳನ್ನು ಸಂಪೂರ್ಣ ನಾಶಗೈದಿದೆ. ಬಾಲೆ ಹಾಗೂ ಇತರ ಕೃಷಿಗೂ ಹಾನಿಯುಂಟಾಗಿದೆ.
ಸಮೀಪದ ವಿಲ್ಸನ್ ಟಿ.ವಿ ಅವರ ತೋಟಕ್ಕೂ ನುಗ್ಗಿದ್ದು ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶಗೊಳಿ ಸಿದೆ. ಇಲ್ಲಿನ ನಿವಾಸಿ ವಿಲ್ಸನ್ ಎಂಬವರ ಮನೆಯ ಹಿಂಬದಿಯ ಅಂಗಳದವರೆಗೂ ಕಾಡಾನೆ ಬಂದಿದ್ದು ತೋಟದಲ್ಲಿ ಸಂಪೂರ್ಣ ನಾಶಗೊಳಿಸಿದೆ. ಕ್ಸೇವಿಯರ್, ಶ್ರೀನಿವಾಸ ಅವರ ತೋಟಗಳಲ್ಲಿಯು ಕೃಷಿಗೆ ಹಾನಿಯುಂಟುಮಾಡಿದೆ. ಆನೆ ಹೋದ ದಾರಿಯಲ್ಲೆಲ್ಲ ಹಲವರ ತೋಟಗಳಲ್ಲಿ ಕೃಷಿಗಳನ್ನು ನಾಶಗೊಳಿ ಸುತ್ತಾ ಸಾಗಿದೆ.
ಸಂಜೆಯ ವೇಳೆಗೆ ಧರ್ಮಸ್ಥಳ ದಿಂದ ನೇರ್ತನೆಗೆ ಹೋಗುವ ರಸ್ತೆಯ ಬದಿಯಲ್ಲಿ ಕಲ್ಲೇರಿ ಸಮೀಪವೇ ಕಾಡನೆ ಕಾಣಿಸಿಕೊಳ್ಳುತ್ತಿದೆ. ಪ್ರತಿನಿತ್ಯ ಶಾಲಾ ಮಕ್ಕಳು ಸೇರಿದಂತೆ ನೂರಾರು ಜನರು ಓಡಾಡುವ ರಸ್ತೆಯ ಬದಿಯಲ್ಲಿಯೇ ಕಾಡಾನೆ ಕಾಣಿಸುತ್ತಿರುವುದು ಜನರಲ್ಲಿ ಆತಂಕಮೂಡಿಸಲು ಕಾರಣವಾಗಿದೆ.







