ಹಳೆಯಂಗಡಿ: ಸಾರ್ವಜನಿಕರ ದೂರು ಆಲಿಸಲು ‘ಮನೆ ಮನೆಗೆ ಭೇಟಿ’ ಕಾರ್ಯಕ್ರಮಕ್ಕೆ ಚಾಲನೆ

ಹಳೆಯಂಗಡಿ: ಸಾರ್ವಜನಿಕರ ಸಮಸ್ಯೆ, ದೂರು ಆಲಿಸಲು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಮನೆಬಾಗಿಲಿಗೆ ಬರುವಂತಹಾ ವಿನೂತನ ಪರಿಕಲ್ಪನೆಯಾದ ‘ಮನೆ ಮನೆಗೆ ಭೇಟಿ’ ಕಾರ್ಯಕ್ರಮಕ್ಕೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಿ.ಎಸ್ ಅವರ ಮುಂದಾಳತ್ವದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಮುಲ್ಕಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಹಳೆಯಂಗಡಿ ಗ್ರಾಮ ವ್ಯಾಪ್ತಿಯ ಹಳೆಯಂಗಡಿ ಮತ್ತು ಪಾವಂಜೆ ಪ್ರದೇಶದ ಬೀಟ್ ಸಿಬ್ಬಂದಿ, ಹಳೆಯಂಗಡಿಯ ಗ್ರಾಮ ಪ್ರದೇಶಗಳಿಗೆ ತೆರಳಿ ಸೈಬರ್ ಅಪರಾಧ, ಮಾದಕ ವಸ್ತು, ಪೊಕ್ಸೊ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಅರಿವು ಮೂಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿಗಳಾದ ಮಹೇಶ್ ಪಾಟೀಲ್, ಮಧುಕರ ಹಾಗೂ ಇತರರು ಭಾಗವಹಿಸಿದ್ದರು.
Next Story







