ಉಳ್ಳಾಲದ ಹೂವಿನ ವ್ಯಾಪಾರಿಗೆ ತೆರಿಗೆ ಇಲಾಖೆಯಿಂದ ನೋಟಿಸ್ ?

ಮಂಗಳೂರು, ಜು.19: ನಗರದಲ್ಲಿ ತಳ್ಳುವ ಗಾಡಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಉಳ್ಳಾಲದ ವ್ಯಾಪಾರಿಯೊಬ್ಬರಿಗೆ ವಾಣಿಜ್ಯ ತೆರಿಗೆ ಇಲಾಖೆಯು 52 ಲಕ್ಷ ರೂ. ಪಾವತಿಸುವಂತೆ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ.
ಯುಪಿಐ ಮೂಲಕ 40 ಲಕ್ಷ ರೂ.ಗಿಂತ ಅಧಿಕ ವಹಿವಾಟು ನಡೆಸಿದ ಬೇಕರಿ, ಬೀಡ ಅಂಗಡಿ ಸಹಿತ ಸಣ್ಣಪುಟ್ಟ ಅಂಗಡಿ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಪಾವತಿಸಬೇಕು ಎಂದು ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಯ ಬಿಸಿ ನಗರ ಮತ್ತು ಗ್ರಾಮಾಂತರ ಪ್ರದೇಶದ ಹಲವು ಮಂದಿಯ ಆತಂಕಕ್ಕೆ ಎಡೆ ಮಾಡಿಕೊಟ್ಟಿವೆ.
ಉಳ್ಳಾಲ ಮೂಲದ ಹೂವಿನ ವ್ಯಾಪಾರಿ ಸೋಮೆಗೌಡ ಎಂಬವರು ನಗರದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದು, ಇದೀಗ ಅವರಿಗೆ 52 ಲಕ್ಷ ರೂ. ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿಗೊಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ನಾನು ಸುಮಾರು 10 ವರ್ಷದಿಂದ ಹೂವಿನ ವ್ಯಾಪಾರ ಮಾಡುತ್ತಿದ್ದೇನೆ. ಇದೀಗ ಎರಡು ಬಾರಿ ತೆರಿಗೆ ಪಾವತಿಸುವಂತೆ ನೋಟಿಸ್ ಬಂದಿದೆ. ಬಡವ್ಯಾಪಾರಿಯಾದ ನಾನು ಎಲ್ಲಿಂದ ಹಣ ಕಟ್ಟುವುದು? ನನಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ಅಳಲು ತೋಡಿಕೊಂಡಿರುವುದಾಗಿ ವರದಿಯಾಗಿದೆ.





