ಕರಾವಳಿಯಲ್ಲಿ ಮತ್ತೆ ಎರಡು ದಿನಗಳ ರೆಡ್ ಅಲರ್ಟ್: ಭಾರೀ ಮಳೆಯ ಸೂಚನೆ

ಮಂಗಳೂರು, ಜು.19: ಕರಾವಳಿಯಲ್ಲಿ ಮತ್ತೆ ಭಾರೀ ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಜು. 20 ಮತ್ತು 21 ರಂದು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಅಬ್ಬರಿಸಿದ ಮಳೆ ಶನಿವಾರ ಸ್ವಲ್ಪ ಕಡಿಮೆಯಾಗಿತ್ತು. ಮುಂದೆ ಎರಡು ದಿನಗಳು ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಸಾಧಾರಣ ಮಳೆ ಸುರಿದಿರುವುದು ವರದಿಯಾಗಿದೆ.ಸತತವಾಗಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಸಾಕಷ್ಟು ಹಾನಿಯೂ ಉಂಟಾಗಿತ್ತು.
ವ್ಯಕ್ತಿಯೊಬ್ಬರು ಮಳೆ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಪ್ರಾಕೃತಿಕ ವಿಕೋಪಕ್ಕೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ದ.ಕ.ಜಿಲ್ಲೆಯಲ್ಲಿ ಜನವರಿ 1ರಿಂದ ಶನಿವಾರದವರೆಗೆ ಸರಾಸರಿ 2,911 ಮಿಲಿಮೀಟರ್ ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ವಾಡಿಕೆಯ ಮಳೆ 1930 ಮಿಲಿ ಮೀಟರ್. ಈ ವರ್ಷ 981 ಮಿ.ಮೀ ಅಧಿಕ ಮಳೆ ಸುರಿದಿದೆ.
1102 ಮನೆಗಳಿಗೆ ಹಾನಿ
ಜಿಲ್ಲೆಯಲ್ಲಿ ಜನವರಿ 1ರಿಂದ ಜುಲೈ 19ರವರೆಗೆ ಒಟ್ಟು 1,102 ಮನೆಗಳಿಗೆ ಭಾಗಶ: ಹಾನಿಯಾಗಿದೆ. 100 ಮನೆಗಳು ಸಂಪೂರ್ಣವಾಗಿ ಕುಸಿದಿವೆ. 37 ಜಾನುವಾರು ಪ್ರಾಣಹಾನಿಯಾಗಿದೆ.
ಮಳೆಯ ಕಾರಣದಿಂದಾಗಿ ಮಳೆಯ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರು ತಾಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಳ್ಳಾಲ ನೇತ್ರಾವತಿ ಸೇತುವೆಯಿಂದ ಸುರತ್ಕಲ್ ಮುಕ್ಕ ನಂದಿನಿ ನದಿ ಸೇತುವೆಯವರೆಗೆ ಹಾಗೂ ಪೂರ್ವದಲ್ಲಿ ವಳಚ್ಚಿಲ್, ಅಡ್ಡೂರು ಸೇತುವೆ, ಎಡಪದವು, ಬಜ್ಪೆ ಎಕ್ಕಾರು ವರೆಗಿನ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಅಲ್ಲದೆ ಉಳ್ಳಾಲ ಮತ್ತು ಬಂಟ್ವಾಳ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸರಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು . ಕಡಲು ಪ್ರಕ್ಷುಬ್ಧ: ಭಾರೀ ಮಳೆಯಿಂದಾಗಿ ಜಿಲ್ಲೆಯ ನದಿಗಳು ಮೈದುಂಬಿ ಹರಿಯುತ್ತಿವೆ. ತುಂಬೆ ಮತ್ತು ಎಎಂಆರ್ ಡ್ಯಾಂ ತುಂಬಿಕೊಂಡಿದೆ. ಕಡಲು ಕೂಡ ಪ್ರಕ್ಷುಬ್ಧ ಗೊಂಡಿದ್ದು, ಉಳ್ಳಾಲ ಸಮುದ್ರದಲ್ಲಿ ಕಡಲ ಭೋರ್ಗರೆತ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ದ.ಕ. ಜಿಲ್ಲೆಯಲ್ಲಿ 28 ಮಿ.ಮೀ ಮಳೆ ದಾಖಲು : ಶನಿವಾರ ಬೆಳಗ್ಗಿನ ವರೆಗೆ ದ.ಕ. ಜಿಲ್ಲೆಯಲ್ಲಿ ಒಟ್ಟು 28 ಮಿಲಿ ಮೀಟರ್ ಮಳೆ ದಾಖಲಾಗಿದೆ. ಗರಿಷ್ಠ ಮಳೆ ಮಂಗಳೂರಲ್ಲಿ 55.4 ಮಿ.ಮೀ. ಆಗಿದೆ. ಬೆಳ್ತಂಗಡಿ 8.5 ಮಿ.ಮೀ, ಬಂಟ್ವಾಳ 43.1 ಮಿ.ಮೀ, ಪುತ್ತೂರು 32.6 ಮಿ.ಮೀ, ಸುಳ್ಯ 31 ಮಿ.ಮೀ, ಮೂಡುಬಿದಿರೆ 21.9 ಮಿ.ಮೀ, ಕಡಬ 26.6 ಮಿ.ಮೀ, ಮೂಲ್ಕಿ 28.5 ಮಿ.ಮೀ, ಉಳ್ಳಾಲ 48.1 ಮಿ.ಮೀ. ಮಳೆ ವರದಿಯಾಗಿದೆ.







