ಧರ್ಮಸ್ಥಳ ಪ್ರಕರಣದಲ್ಲಿ ಸರಕಾರ ನಿರಾಸಕ್ತಿ: ʼವಿಮ್ʼ ಆರೋಪ

ಮಂಗಳೂರು,ಜು.19: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಕೊಲೆ ಕೃತ್ಯದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರ ಆಸಕ್ತಿ ತೋರುತ್ತಿಲ್ಲ. ಇದರ ಹಿಂದೆ ದೊಡ್ಡ ವ್ಯವಸ್ಥೆಯೇ ಶಾಮೀಲಾಗಿರುವ ಅನುಮಾನ ಮೂಡುತ್ತಿದೆ ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್‌ನ ರಾಜ್ಯ ಘಟಕದ ಅಧ್ಯಕ್ಷೆ ಫಾತಿಮಾ ನಸೀಮಾ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಕ್ಷಿ ದೂರುದಾರರ ಹೇಳಿಕೆ ಪ್ರಕಾರ ಹಲವಾರು ಕೊಲೆಗಳು ನಡೆದಿವೆ. ಮಾನವ ಸಂಕುಲವೇ ತಲೆತಗ್ಗಿಸುವ ಸಂಗತಿ ಇದಾಗಿದೆ. ಪೊಲೀಸ್ ಇಲಾಖೆಯು ತನಿಖೆಗೆ ವಿಳಂಬ ಮಾಡುವುನ್ನು ಗಮನಿಸಿದಾಗ ಸಾಕ್ಷಿ ನಾಶಕ್ಕೆ ಪ್ರಯತ್ನಿಸುತ್ತಿ ರುವ ಬಗ್ಗೆ ಸಂಶಯ ಕಾಡುತ್ತಿವೆ. ಹೆಣ್ಣು ಮಕ್ಕಳ ರಕ್ಷಣೆಗೆ ತಾವಿರುವುದಾಗಿ ಹೇಳಿಕೊಳ್ಳುವ ಹಿಂದುತ್ವ ವಾದಿಗಳು ಮೌನ ತಾಳಿದ್ದಾರೆ. ಲವ್ ಜಿಹಾದ್ ಹೆಸರಿನಲ್ಲಿ ಗುಲ್ಲೆಬ್ಬಿಸುವವರಿಗೆ ಧರ್ಮಸ್ಥಳ ಪ್ರಕರಣದ ಹೆಣ್ಮಕ್ಕಳ ಬಗ್ಗೆ ಕಾಳಜಿ ಇಲ್ಲದಿರುವುದು ವಿಪರ್ಯಾಸ ಎಂದರು.
ಈ ಘಟನೆ ಸಂಬಂಧ ನ್ಯಾಯಾಧೀಶರ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಅವರು ಪ್ರಕರಣವು ಗಂಭೀರ ಸ್ವರೂಪದ್ದಾಗಿದ್ದರೂ ಇದರ ವಿರುದ್ಧ ಪ್ರತಿಭಟಿಸಲು ಪೊಲೀಸ್ ಇಲಾಖೆ ಅವಕಾಶ ನಿರಾಕರಿಸುತ್ತಿದೆ. ಹಾಗಾಗಿ ಪ್ರಕರಣದ ಬಗ್ಗೆ ಮನೆಮನೆ ತಲುಪುವ ಪೋಸ್ಟರ್ ಅಭಿಯಾನ ನಡೆಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ರಾಜ್ಯ ಸಮಿತಿ ಸದಸ್ಯೆ ಜಬೀನ್ ಮೈಸೂರು, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯೆ ಆಯಿಷಾ ಬೆಂಗಳೂರು, ಶಮೀಮಾ ತುಂಬೆ, ಝಾಹಿದಾ ಪುತ್ತೂರು ಉಪಸ್ಥಿತರಿದ್ದರು.







