ಸುಳ್ಯ: ಕುಡಿದು ಎಸ್‌ಐ ಜತೆ ಅನುಚಿತವಾಗಿ ವರ್ತಿಸಿದ ಆರೋಪಿಗೆ ಸಮುದಾಯ ಸೇವೆಯ ಶಿಕ್ಷೆ

ಸುಳ್ಯ : ಕುಡಿದು ವಾಹನ ಚಲಾಯಿಸಿದಲ್ಲದೇ ಕರ್ತವ್ಯ ನಿರತ ಸುಳ್ಯ ಠಾಣಾ ಎಸ್‌ಐ ಜತೆ ಅನುಚಿತವಾಗಿ ವರ್ತಿಸಿದ ಆರೋಪಿಗೆ ಸುಳ್ಯ ನ್ಯಾಯಾಲಯ ದಂಡದೊಂದಿಗೆ ಸಮುದಾಯ ಸೇವೆಯ ಶಿಕ್ಷೆಯನ್ನು ನೀಡಿ ಆದೇಶಿಸಲಾಗಿದೆ.
ಆರೋಪಿ ಅಂಕಿತ್ ಪಲ್ಸಾಯ ಎಂಬಾತ ಎ. 22ರಂದು ರಾತ್ರಿ ಕೆ.ವಿ.ಜಿ. ಜಂಕ್ಷನ್ ಬಳಿ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿ, ವಾಹನದ ದಾಖಲಾತಿಗಳನ್ನು ಹಾಜರು ಪಡಿಸದೆ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿಕೊಂಡು ಹೋದ ಬಗ್ಗೆ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಹಿರಿಯ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಬಾಬು ಅವರು ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ರೂ. 10,000 ದಂಡ ಮತ್ತು ಸಮುದಾಯ ಸೇವೆಯ ಶಿಕ್ಷೆ ನೀಡಿ ಆದೇಶ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಆರೋಪಿ ಜು. 19 ರಿಂದ 28 ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ 12 ಗಂಟೆಯವರೆಗೆ ಸುಳ್ಯ ಪೊಲೀಸ್ ಠಾಣೆಯ ಆವರಣವನ್ನು ಶುಚಿಗೊಳಿಸುವ ಮೂಲಕ ಸಮುದಾಯ ಸೇವೆ ಮಾಡಲು ಆದೇಶ ನೀಡಲಾಗಿದೆ. ಅಲ್ಲದೇ ಕಲಂ 179 ರ ಅಪರಾಧಕ್ಕಾಗಿ ರೂ 2,000 ದಂಡ ವಿಧಿಸಲಾಗಿದೆ.







