ಮೀನುಗಾರಿಕೆಯಿಂದ ಪೌಷ್ಠಿಕಾಂಶ ಭದ್ರತೆ: ಡಾ. ಸುಶಾಂತ್ ಕುಮಾರ್ ರೈ

ಮಂಗಳೂರು : ಮೀನುಗಾರಿಕೆ ಲಕ್ಷಾಂತರ ಜನರಿಗೆ ಜೀವನೋಪಾಯವನ್ನು ಕಲ್ಪಿಸಿರುವುದು ಮಾತ್ರ ವಲ್ಲದೆ, ಆಹಾರದ ಪೌಷ್ಠಿಕಾಂಶದ ಭದ್ರತೆಯನ್ನು ಒದಗಿಸಿದೆ ಎಂದು ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು, ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲ(ಕೆವಿಎಎಫ್‌ಎಸ್‌ಯು)ಯದ ಆಡಳಿತ ಮಂಡಳಿಯ ಸದಸ್ಯ ಡಾ. ಸುಶಾಂತ್ ಕುಮಾರ್ ರೈ ಹೇಳಿದ್ದಾರೆ.
ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಪಶು ವೈದ್ಯಕೀಯ, ಪಶು, ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿವಿ, ಮಂಗಳೂರು ಮೀನುಗಾರಿಕಾ ಕಾಲೇಜಿನ ಜಲ ಕೃಷಿ ವಿಭಾಗ, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಹಾಗೂ ವಿವಿಧ ಸಹ ಸಂಸ್ಥೆಗಳ ಸಹಯೋಗ ದಲ್ಲಿ ಆಯೋಜಿಸಲಾದ ಮೀನು ಕೃಷಿಕರ ದಿನಾಚರಣೆ ಮತ್ತು ಗುಣಮಟ್ಟದ ಮೀನುಮರಿ ಉತ್ಪಾದನೆಯಲ್ಲಿ ಸವಾಲು ಮತ್ತು ಅವಕಾಶಗಳ ಕುರಿತಂತೆ ಆಯೋಜಿಸಲಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳು ಮಾಡುವ ಸಂಶೋಧನೆಗಳು ಮೀನು ಕೃಷಿಕರನ್ನು ತಲುಬೇಕು. ಇದು ಗ್ರಾಮೀಣ ಪ್ರದೇಶಗಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿ ಹಾಗೂ ರೋಗಗಳ ನಿಯಂತ್ರಣ ಹಾಗೂ ಉದ್ಯಮಶೀಲತೆಯ ಗುರಿಯನ್ನು ಸಾಧಿಸಲು ಪೂರಕವಾಗಿರಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಮೊಗ್ಗ ಜಿಲ್ಲೆಯ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಿರೇಶ್ ಒ. ಅವರು ಮಾತನಾಡಿ, ಉತ್ತರ ಕರ್ನಾಟಕದ ಮೀನು ಕೃಷಿಕರಿಗೆ ನೆರವು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಶೀಘ್ರವೇ ಆಲಮಟ್ಟಿ ಅಣೆಕಟ್ಟು ಎಂದು ಕರೆಯಲ್ಪಡುವ ಲಾಲ್ ಬಹಾದ್ದೂರ್ ಶಾಶ್ತ್ರಿ ಅಣೆಕಟ್ಟಿನ ಬಳಿ ಮೀನು ಸಂತೋನಾತ್ಪತ್ತಿ ಕೇಂದ್ರ ಸ್ಥಾಪಿಸಲಿದೆ ಎಂದರು.
ಇದಕ್ಕಾಗಿ ೨೫ ಎಕರೆ ಭೂಮಿ ಮೀಸಲಿಡಲಾಗಿದ್ದು, ೧೩ ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗಲಿದೆ. ಈ ಕೇಂದ್ರ ಸ್ಥಾಪನೆಯಾದರೆ ೫೦ ಕೋಟಿ ಮೀನು ಮೊಟ್ಟೆಗಳನ್ನು ಉತ್ಪಾದಿಸಲು ಸಾಧ್ಯವಾಗಲಿದೆ. ಆಲಮಟ್ಟಿ ಅಣೆಕಟ್ಟಿನ ಬಳಿ ೨೫ ಎಕರೆ ಭೂಮಿಯನ್ನು ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್‌ನಿಂದ ಖರೀದಿಸ ಲಾಗಿದೆ. ಯೋಜನೆಗಾಗಿ ಒಟ್ಟು ೧೧೨ ಮೀನು ಸಂತಾನೋತ್ಪತ್ತಿ ಕೊಳಗಳನ್ನು ಹೊಂದಲಿದ್ದು, ಆರಂಭದಲ್ಲಿ ಎರಡು ವರ್ಷಗಳ ಕಾಲ ಮರಿ ಮೀನುಗಳನ್ನು ಬಳಸಲಾಗುತ್ತದೆ. ಬಳಿಕ ಸಂತಾನೋತ್ಪತ್ತಿ ಪ್ರಕ್ರಿಯೆ ಆರಂಭವಾಗಲಿದೆ. ವರ್ಷಕ್ಕೆ ಸುಮಾರು ೫೦ ಕೋಟಿ ಮೀನು ಉತ್ಪಾದನೆಯ ಗುರಿ ಹೊಂದ ಲಾಗಿದೆ. ಇದನ್ನು ಬಾಗಲಕೋಟೆ, ಯಾದಗಿರಿ, ಬೀದರ್ ಮತ್ತು ಹತ್ತಿರದ ಜಿಲ್ಲೆಗಳ ಮೀನು ಕೃಷಿಕರು ಬಳಸಲಿದ್ದಾರೆ ಎಂದು ಅವರು ಹೇಳಿದರು.
ಕೆವಿಎಎಫ್‌ಎಸ್‌ಯುನ ವಿಸ್ತರಣಾ ನಿರ್ದೇಶಕ ಡಾ. ಬಸವರಾಜ ಅವಟಿ, ಪಿಲ್ಲರಿ ಅಕ್ವಾಕಲ್ಚರ್ ಫೌಂಡೇಶನ್‌ನ ಡಾ.ಎಸ್.ಎಂ. ಶಿವಪ್ರಕಾಶ್, ಸೊಸೈಟಿ ಆಫ್ ಫಿಶರೀಸ್ ಮತ್ತು ಲೈಫ್ ಸಾಯನ್ಸ್‌ನ ಡಾ. ಕುಮಾರ್ ನಾಯ್ಕ್, ದ.ಕ. ಜಿಲ್ಲಾ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಯ್ಯ, ಡಾ. ಎಸ್.ಆರ್. ಸೋಮಶೇಖರ ಮೊದಲಾದವರು ಉಪಸ್ಥಿತರಿದ್ದರು.
ಫಿಶರೀಸ್ ಕಾಲೇಜಿನ ಡೀನ್ ಡಾ. ಆಂಜನೇಯಪ್ಪ ಎಚ್.ಎನ್. ಅಧ್ಯಕ್ಷತೆ ವಹಿಸಿದ್ದರು. ಫಿಶರೀಸ್ ಕಾಲೇಜಿನ ಡಾ. ಗಣಪತಿ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಡಾ. ಹೊನ್ನಾನಂದ ಸ್ವಾಗತಿಸಿ ದರು. ಡಾ. ಪ್ರದೀಪ್ ಎಲ್. ದೊಡ್ಡಮನಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಮೀನು ಕೃಷಿಕರಾದ ಮಂಡ್ಯದ ಶಿವಣ್ಣ ಮತ್ತು ಮೂಡಬಿದಿರೆಯ ರಾಜೇಶ್ ಬಿ.ಕೆ. ಅವರನ್ನು ಸನ್ಮಾನಿಸಲಾಯಿತು.







