ಮಂಗಳೂರು-ಮಡಗಾಂವ್ ಎಕ್ಸ್‌ಪ್ರೆಸ್| ಪಣಿಯೂರು ರೈಲು ನಿಲ್ದಾಣದಲ್ಲಿ ಸ್ವಾಗತ

ಪಡುಬಿದ್ರಿ: ಪಣಿಯೂರಿನಲ್ಲಿರುವ ಪಡುಬಿದ್ರಿ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಮಂಗಳೂರು - ಮಡಂಗಾವ್ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಆರಂಭಗೊಂಡಿದೆ.
ರೈಲು ನಿಲುಗಡೆ ಹೋರಾಟ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಪಣಿಯೂರಿನಲ್ಲಿರುವ ಪಡುಬಿದ್ರಿ ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡ ಮೆಮು ರೈಲನ್ನು ಸ್ವಾಗತಿಸಲಾಯಿತು.
ಗೋವಾದಿಂದ ರೈಲು ಚಲಾಯಿಸಿಕೊಂಡು ಬಂದ ಚಾಲಕರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಸಂದರ್ಭ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಪಣಿಯೂರು ರೈಲು ನಿಲ್ದಾಣದ ಅಭಿವೃದ್ಧಿ, ಮಂಗಳೂರು-ಮಡಗಾಂವ್ ಎಕ್ಸ್‍ಪ್ರೆಸ್, ಮುಂಬಯಿ, ಬೆಂಗಳೂರು ರೈಲು ನಿಲಗಡೆಗೆ ಅವಕಾಶ ನೀಡುವಂತೆ ಹಲವು ವರ್ಷಗಳಿಂದ ಬೇಡಿಕೆ ನೀಡುತ್ತಾ ಬಂದಿದ್ದೇವೆ. ನಮ್ಮ ಹೋರಾಟಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಬೆಂಬಲ ನೀಡಿದ್ದು, ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರ ಮೂಲಕವಾಗಿ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದರು.
ರೈಲು ನಿಲ್ದಾಣ ಅಭಿವೃದ್ದಿಗೆ ಪೂರಕವಾಗಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಅದಾನಿ ಸಿಎಸ್‍ಆರ್ ಅನುದಾನದಲ್ಲಿ 15 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದ್ದು ಮುಂದುವರಿದ ಕಾಮಗಾರಿಗೆ ಮತ್ತೆ 20 ಲಕ್ಷ ರೂ. ಸಿಎಎಸ್‍ಆರ್ ಅನುದಾನ ಬಳಸಲಾಗುವುದು. ಸೋಲಾರ್ ದೀಪಗಳ ಅಳವಡಿಕೆಗೂ ಒತ್ತು ನೀಡಲಾಗುವುದು ಎಂದರು.
ಹೋರಾಟ ಸಮಿತಿಯ ರಾಕೇಶ್ ಕುಂಜೂರು, ಗ್ರಾಮಸ್ಥರು, ರೈಲ್ವೇ ಸ್ಟೇಷನ್ ಮಾಸ್ಟರ್ ಶಂಕರನ್, ಸಿಬಂದಿಗಳಾದ ಸುಜಿತ್, ಆದೇಶ್ ಹೆಗ್ಡೆ, ಲಲಿತಾ, ಶಾಂತ, ರಿಕ್ಷಾ ಚಾಲಕರು ಉಪಸ್ಥಿತರಿದ್ದರು.







