ಮಂಗಳೂರು: ಮರಳು ಅಕ್ರಮ ಸಾಗಾಟಕ್ಕೆ ಬೆಂಗಾವಲು ವಾಹನಗಳ ವಶ

ಮಂಗಳೂರು, ಜು.30: ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಹಾಗೂ ಅದರ ಬೆಂಗಾವಲಿಗೆ ಬಳಕೆ ಮಾಡುತ್ತಿದ್ದ ಸ್ಕೂಟರ್‌ನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಉಪನಿರೀಕ್ಷಕ ಶಿವಕುಮಾರ್ ಮಂಗಳವಾರ ಬೆಳಗ್ಗೆ 6:30ಕ್ಕೆ ವಾಹನಗಳ ತಪಾಸಣೆ ನಡೆಸು ತ್ತಿದ್ದಾಗ ಆಡಂಕುದ್ರುವಿನ ಚಾಪೆಲ್ ಚರ್ಚ್ ರಸ್ತೆೆಯಲ್ಲಿ ಪಿಕಪ್‌ನ ಚಾಲಕನು ಪೊಲೀಸರನ್ನು ಕಂಡು ವಾಹನವನ್ನು ನಿಲ್ಲಿಸಿ ಕೆಳಗೆ ಇಳಿದು ಓಡಿ ಹೋಗಿದ್ದ. ಅದರ ಹತ್ತಿರದಲ್ಲಿ ಬರುತ್ತಿದ್ದ ಸ್ಕೂಟರ್ ಸವಾರ ನೌಷಾದ್ ಆಲಿಯನ್ನು ವಶಕ್ಕೆೆ ಪಡೆದು ವಿಚಾರಿಸಿದಾಗ ತಾನು ಸುನೀಲ್ ಡಿಸೋಜನೊಂದಿಗೆ ಸೇರಿ ಆಡಂಕುದ್ರುವಿನಲ್ಲಿ ನೇತ್ರಾವತಿ ನದಿ ತೀರದಿಂದ ಮರಳು ತುಂಬಿಸಿಕೊಂಡು ಹೋಗುತ್ತ್ತಿದ್ದ ಪಿಕಪ್ ವಾಹನಕ್ಕೆ ಬೆಂಗವಲಾಗಿರುವುದಾಗಿ ತಿಳಿಸಿದ. ಆರೋಪಿಗಳು ರಾಜ್ಯ ಸರಕಾರಕ್ಕೆ ರಾಜಧನ ಪಾವತಿಸದೆ ಮರಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಖಚಿತವಾದ ಹಿನ್ನಲೆಯಲ್ಲಿ ಪಿಕಪ್ ವಾಹನ, ಸ್ಕೂಟರ್ ಮತ್ತು ಮರಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





