ಕ್ರೈಸ್ತ ಸನ್ಯಾಸಿನಿಯರ ಬಿಡುಗಡೆಗೆ ಮಾಜಿ ಶಾಸಕ ಜೆ.ಆರ್. ಲೋಬೊ ಆಗ್ರಹ

ಮಂಗಳೂರು. ಆ.1: ಕೇರಳ ಮೂಲದ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ಸುಳ್ಳು ಆರೋಪ ಹೊರಿಸಿ ಛತ್ತೀಸ್‌ಗಢದಲ್ಲಿ ಬಂಧಿಸಲಾಗಿದೆ. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಆಗ್ರಹಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ತ್ರಿಶೂರು ಮೂಲದ ಕ್ರೈಸ್ತ ಸನ್ಯಾಸಿನಿಯರಾದ ವಂದನ ಫ್ರಾನ್ಸಿಸ್ ಮತ್ತು ಪ್ರೀತಿ ಮೇರಿ ಅವರನ್ನು ಮೂವರು ಯುವತಿಯರು ಹಾಗೂ ಓರ್ವ ಯುವಕನೊಂದಿಗೆ ಪ್ರಯಾಣಿಸುತ್ತಿದ್ದಾಗ ಮತಾಂತರ, ಮಾನವ ಕಳ್ಳ ಸಾಗಾಣಿಕೆಯ ಸುಳ್ಳು ಆರೋಪ ಹೊರಿಸಿ ಬಂಧಿಸಿರುವುದು ಧಾರ್ಮಿಕ ಹಾಗೂ ಮಾನವ ಹಕ್ಕುಗಳ ಕಗ್ಗೊಲೆಯಾಗಿದೆ. ಇದಕ್ಕೆ ಅಲ್ಲಿನ ಸರಕಾರದ ಪಿತೂರಿಯೇ ಕಾರಣ ಎಂದು ಆಪಾದಿಸಿದರು.
ಕ್ರೈಸ್ತರು ಮತಾಂತರ ನಡೆಸಿದ್ದೇ ಆಗಿದ್ದರೆ, ಮಂಗಳೂರಿನಲ್ಲಿ ಶೇ. 90ರಷ್ಟು ಕ್ರೈಸ್ತರೇ ಇರಬೇಕಿತ್ತು. ಒಂದು ಕಾಲದಲ್ಲಿ ಮಂಗಳೂರಿನ ಶಿಕ್ಷಣ ಸಂಸ್ಥೆಗಳನ್ನು ಕ್ರೈಸ್ತರು ನಡೆಸುತ್ತಿದ್ದರು. ಅವರು ಎಷ್ಟು ಮತಾಂತರ ಮಾಡಿದ್ದಾರೆ ಎಂದು ಪ್ರಶ್ನಿಸಿದ ಲೋಬೋ, ಪ್ರಧಾನಿ ನರೇಂದ್ರ ಮೋದಿಗೆ ಜಗತ್ತು ಸುತ್ತಲು ಸಮಯವಿದೆ. ಆದರೆ ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಟಿ.ಕೆ. ಸುಧೀರ್, ಕೆ.ಕೆ. ಶಾಹುಲ್ ಹಮೀದ್, ಅಪ್ಪಿ, ಶಾಲೆಟ್ ಪಿಂಟೊ, ಚೇತನ್ ಬೆಂಗ್ರೆ, ಅಲ್ವಿನ್ ಪ್ರಕಾಶ್, ಜಾನ್ ಮೊಂತೇರೊ, ನೆಲ್ಸನ್ ಮೊಂತೇರೊ, ಪ್ರಕಾಶ್ ಸಾಲ್ಯಾನ್, ಪ್ರೇಮನಾಥ್, ಉದಯ ಆಚಾರ್ ಉಪಸ್ಥಿತರಿದ್ದರು.







