ಮುಡಿಪು: ಆಟಿದ ಕೂಟದಲ್ಲಿ ಸ್ವಚ್ಛತೆ, ಸೌಹಾರ್ದತೆ, ಸಹಬಾಳ್ವೆಯ ಸಂದೇಶ

ಮುಡಿಪು: ಜನ ಶಿಕ್ಷಣ ಟ್ರಸ್ಟ್ ನ ಸ್ಮೈಲ್ ಸ್ಕಿಲ್ ಸ್ಕೂಲ್ ನಲ್ಲಿ ಆಟಿದ ಕೂಟ ಸ್ವಚ್ಛತೆ,ಸೌಹಾರ್ದತೆ, ಸಹಬಾಳ್ವೆಯ ಸಂದೇಶ ದೊಂದಿಗೆ ವಿಶಿಷ್ಟ ರೀತಿಯಲ್ಲಿ ನಡೆಯಿತು.
ತುಳುನಾಡಿನ ಮಳೆಗಾಲದ ಕಷ್ಟದ ದಿನಗಳನ್ನು ನೆನಪಿಸುವ ಆಟಿದ ಕೂಟದ ಹಿನ್ನೆಲೆಯ ಬಗ್ಗೆ ವಿದ್ಯಾರ್ಥಿನಿಯರಾದ ಸಂಶೀರಾ, ಶಾಹಿನ,ರೀಶಲ್ ರವರ ತುಳು,ಬ್ಯಾರಿ,ಕೊಂಕಣಿ ಭಾಷೆಯ ಮಾತುಗಳು ಮತ್ತು ಶಿಕ್ಷಕಿಯರಾದ ಪ್ರಜ್ಞಾ, ಜನನಿ, ಕಾವೇರಿಯ ವರ ತುಳು ಸಮೂಹ ಗೀತೆ,ಜಾನಪದ ನೃತ್ಯ, ಕವಾಲಿ, ತುಳು, ಮಳೆಯಾಳ,ಕೊಂಕಣಿ,ಕನ್ನಡ ಗೀತೆಗಳು, ತುಳು ಒಗಟುಗಳು, ಏಕ ಪಾತ್ರಾಭಿನಯ,ಭರತ ನಾಟ್ಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಎಲ್ಲಾ ಸಮುದಾಯದ ಮಹಿಳೆಯರು ಒಗ್ಗೂಡಿ ತುಳು ನಾಡ ಸಂಸ್ಕೃತಿ ಯನ್ನು ಬಿಂಬಿಸುವ ಆಟಿದ ಕೂಟವನ್ನು ಸಂಯೋಜಿಸಿ ಮುಕ್ತ ಮಾತುಕತೆ, ಮಾಹಿತಿ, ಮನೋರಂಜನೆ, ಆಹಾರ ವಿನಿಮಯ ಮಾಡಿಕೊಂಡು ಮನಸ್ಸು ಕಟ್ಟುವ ಪ್ರೀತಿ ಹಂಚುವುದರೊಂದಿಗೆ ಖುಷಿ ಪಡುವ ಖುಷಿ ಕೊಡುವ ಕಾರ್ಯ ನಡೆದಿರುವುದು ಸಂತೋಷದ ಸಂಗತಿ ಎಂದು ನರೇಗಾ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ತಿಳಿಸಿದರು.
ಸುಗ್ರಾಮದ ಸಂಯೋಜಕ ಚೇತನ್ ಕುಮಾರ್, ಎಸ್ಐವಿ ಯೋಜನೆಯ ಶಶಿಕಾಂತ್, ಫ್ಲೀಶಾ ಡಿಸೋಜಾ ಅನುಭವಗಳನ್ನು ಹಂಚಿಕೊಂಡರು. ಅಸ್ರೀನ ಸಫ್ರೀನ ಬಹು ಭಾಷೆ ಯಲ್ಲಿ ಕಾರ್ಯ ಕ್ರಮ ನಿರೂಪಿಸಿದರು. ಮಮತಾ ಸ್ವಾಗತಿಸಿದರು. 40ಕ್ಕೂ ಹೆಚ್ಚು ಮನೆಗಳಲ್ಲಿ ತಯಾರಿಸಿ ತಂದಿದ್ದ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಸಾಮೂಹಿಕವಾಗಿ ಸವಿಯಲಾಯಿತು.







