ಬೋಳಿಯಾರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ

ಕೊಣಾಜೆ: ಬೋಳಿಯಾರು ಗ್ರಾಮದ , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಯ ಗೋಡೆ ಬಿರುಕು ಬಿಟ್ಟು ಅಪಾಯಕಾರಿಯಾಗಿದ್ದು ಕೂಡಲೇ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಡಿವೈಎಫ್‌ಐ ಪದಾಧಿಕಾರಿಗಳು ಬೋಳಿಯಾರ್ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿತ್ತು ಹಾಗೂ ಕ್ಷೇತ್ರ ಶಿಕ್ಷಣ ಇಲಾಖೆಯೆ ಗಮನಕ್ಕೂ ತಂದಿತ್ತು. ಇದೀಗ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಅವರು ಸೋಮವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿದ ಶಿಕ್ಷಣಾಧಿಕಾರಿ ಈಶ್ವರ್ ಅವರು, ಶಾಲೆಯ ಅವ್ಯವಸ್ಥೆಯನ್ನು ಸರಿಪಡಿಸಲು ಇಂದೇ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬೋಳಿಯಾರ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾರಾಣಿ ಕೂಡಾ ಉಪಸ್ಥಿತರಿದ್ದು ಶಾಲೆ ಹಾಗೂ ಅಂಗನವಾಡಿಯ ಅವ್ಯವಸ್ಥೆಯನ್ನು ಪರಿಶೀಲಿಸಿದರು.
ಕೇವಲ ಹತ್ತು ಹದಿನೈದು ವರ್ಷಗಳ ಹಿಂದೆಯಷ್ಟೆ ನಿರ್ಮಾಣವಾದ ಶಾಲೆ ಮತ್ತು ಅಂಗನವಾಡಿ ಕಟ್ಟಡವು ಬಿರುಕುಬಿಟ್ಟಿದ್ದು, ಭ್ರಷ್ಟಾಚಾರದ ಕಾರಣಕ್ಕಾಗಿ ಆಗಿದೆ. ಈ ಬಗ್ಗೆ ಕೂಡಾ ಇಲಾಖೆ ತನಿಖೆ ನಡೆಸಬೇಕು ಎಂದು ಡಿವೈಎಫ್‌ಐ ಸಂಘಟನೆಯು ಶಿಕ್ಷಣಾಧಿಕಾರಿಗೆ ಆಗ್ರಹಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳು ವಂತೆ ಕೂಡಾ ವಿನಂತಿಸಿಕೊಂಡಿದೆ.
ಈ ವೇಳೆ ಸಂಘಟನೆಯ ನಾಯಕರಾದ ರಫೀಕ್ ಹರೇಕಳ, ವೈಎಫ್ಐ ಉಳ್ಳಾಲ ತಾಲೂಕು ಕಾರ್ಯ ದರ್ಶಿ ರಿಝ್ವಾನ್ ಹರೇಕಳ, ಉಪಾಧ್ಯಕ್ಷರಾದ ರಝಾಕ್ ಮುಡಿಪು, ಇಬ್ರಾಹಿಂ ಮದಕ, ಅಬೂಬಕರ್ ಜಲ್ಲಿ, ಸ್ಥಳೀಯ ಸಾಮಾಜಿಕ ಹೋರಾಟಗಾರ ಶಮೀರ್ ಒ.ಕೆ. , ಸ್ಥಳೀಯರಾದ ರಿಯಾಝ್ ಕೆ.ಬಿ., ಸಿದ್ದೀಕ್ ಕೆ.ಕೆ., ಶಂಶೀರ್ ಒ.ಕೆ. , ನಿಯಾಝ್ ಜಾರದಗುಡ್ಡೆ, ಮಿಸ್ಬಾಹ್ ಜಾರದಗುಡ್ಡೆ, ಮರ್ಷಾದ್ ಜಾರದಗುಡ್ಡೆ ಉಪಸ್ಥಿತರಿದ್ದರು.







