ಮಂಗಳೂರು ಮೀನುಗಾರಿಕೆ ರಜೆಯ ವಿಚಾರದಲ್ಲಿ ಗೊಂದಲ ಬೇಡ: ಭರತ್ ಕುಮಾರ್ ಉಳ್ಳಾಲ
ಮಂಗಳೂರು, ಸೆ.25: ಈದ್ ಮಿಲಾದ್ ಪ್ರಯುಕ್ತ ಸೆ.28ರಂದು ನಗರದ ಬಂದರ್ ದಕ್ಕೆಯಲ್ಲಿ ಮೀನುಗಾರಿಕೆ ರಜೆಯ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ದ.ಕ.ಮತ್ತು ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ಭರತ್ ಕುಮಾರ್ ಉಳ್ಳಾಲ ಪ್ರತಿಕಿಯಿಸಿದ್ದಾರೆ.
ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಯಾರೂ ಗೊಂದಲ ಸೃಷ್ಟಿಸುವುದು ಬೇಡ. ಒಟ್ಟು 9 ದಿನ ಧಕ್ಕೆಯಲ್ಲಿ ಮೀನು ಮಾರಾಟಕ್ಕೆ ರಜೆಯಿದೆ. ಅದರಲ್ಲಿ ಹಿಂದೂಗಳ 4 ಹಬ್ಬಕ್ಕೆ, ಮುಸ್ಲಿಮರ 3 ಹಬ್ಬಕ್ಕೆ, ಕ್ರೈಸ್ತರ 2 ಹಬ್ಬಕ್ಕೆ ರಜೆ ನೀಡಲಾಗುತ್ತದೆ. ಈ ರಜೆಯ ಸಂದರ್ಭ ಯಾರಿಗೂ ಕೂಡ ಮೀನು ಮಾರಾಟಕ್ಕೆ ಅವಕಾಶವಿಲ್ಲ. ಮುಂಜಾವ 3:45ರ ಬಳಿಕ ದಿನದ ರಜೆ ಪ್ರಾರಂಭವಾಗು ತ್ತದೆ. ಆ ಬಳಿಕ ಯಾರು ಕೂಡ ಮೀನು ತೆಗೆಯುವಂತಿಲ್ಲವೆಂದು ನಿಯಮ ರೂಪಿಸಲಾಗಿದೆ. ಇದು ಕೇವಲ ಸಾಮಾಜಿಕ ಜಾಲತಾಣದಲ್ಲಿ ಆದಂತಹ ಗೊಂದಲವೇ ವಿನಃ ಮೀನುಗಾರರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಬ್ಯಾನರ್ ತೆರವು: ಬಂದರ್ ದಕ್ಕೆಯಲ್ಲಿ ಅಳವಡಿಸಲಾಗಿದ್ದ ಬ್ಯಾನರನ್ನು ಪೊಲೀಸರ ಸೂಚನೆಯಂತೆ ತೆರವು ಮಾಡಲಾಗಿದೆ. ದಕ್ಕೆಯಲ್ಲಿ ಹಸಿಮೀನು ಮಾರಾಟಗಾರರು ನಿಯಮವನ್ನು ರೂಪಿಸಿದ್ದು, ಅದರಂತೆ ಯಾವುದೇ ಬೇಧ-ಭಾವವಿಲ್ಲದೆ ನಡೆದು ಕೊಂಡು ಬಂದಿದೆ. ಈ ಬಾರಿಯೂ ಅದರಂತೆ ಸೂಚನೆ ನೀಡಲಾಗಿದೆ. ಆದರೆ ಬ್ಯಾನರ್ ಹಾಕಿರುವುದರಿಂದ ವಿವಾದ ಸೃಷ್ಟಿಯಾಗಿತ್ತು. ಇದೀಗ ಈ ವಿವಾದಕ್ಕೆ ತೆರೆ ಎಳೆಯಲಾಗಿದೆ ಎಂದು ಮೀನು ವ್ಯಾಪಾರಸ್ಥರು ತಿಳಿಸಿದ್ದಾರೆ.





