ರಾಜ್ಯ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಮಾಹಿತಿ ಇಲ್ಲ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿ ಏನನ್ನೂ ಹೇಳಿಲ್ಲ. ಸಚಿವ ಸಂಪುಟ ಪುನರ್ ರಚನೆ ಯಾವಾಗ ಬೇಕಾದರೂ ಆಗಬಹುದು. ಇದೇ ತಿಂಗಳು ಸಂಪುಟ ಪುನರ್ ರಚನೆ ಎಂದು ಮುಖ್ಯಮಂತ್ರಿ ಹೇಳಿಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಸೋಮವಾರ ಔತಣ ಕೂಟಕ್ಕೆ ಕರೆದಿದ್ದಾರೆ. ನನ್ನನ್ನೂ ಬರಬೇಕು ಎಂದು ಕರೆದಿದ್ದಾರೆ. ಅಲ್ಲಿ ಏನಾಗುತ್ತೊ ನೋಡೋಣ ಎಂದರು.
ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಈಗ ಮುಖ್ಯಮಂತ್ರಿ ಇದ್ದಾರೆ. ಪಕ್ಷದ ಹೈಕಮಾಂಡ್, ಹಿರಿಯ ಮುಖಂಡರು ನಿರ್ಧಾರ ಕೈಗೊಳ್ಳಲಿದ್ದಾರೆ. ಅವರ ತೀರ್ಮಾನ ಅಂತಿಮ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡ ನಾಯಕ ಹಾಗೂ ಜನಪ್ರಿಯ ನಾಯಕ ಎಂದರು.
ಪವರ್ ಶೇರಿಂಗ್ ವಿಚಾರದಲ್ಲಿ ಕೇಳುವ ಪ್ರಶ್ನೆಗೆ ನನ್ನಲ್ಲಿ ಉತ್ತರ ಇಲ್ಲ. ಯಾರು ಏನೇನೋ ಮಾತಾಡಿದರೆ ಅದಕ್ಕೆಲ್ಲ ನಾನು ಉತ್ತರ ಕೊಡಲಾಗುವುದಿಲ್ಲ. ಒಬ್ಬರು ಮುಖ್ಯಮಂತ್ರಿ ಇದ್ದಾಗ ಅವರ ಬದಲಾವಣೆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ, ಇದು ಸ್ಪಷ್ಟ. ನಮ್ಮ ಹೈಕಮಾಂಡ್ ಇದೆ. ಪಕ್ಷದ ಹಿರಿಯ ನಾಯಕರಿದ್ದಾರೆ. ಅವರ ತೀರ್ಮಾನವೇ ಅಂತಿಮ. ಈಗ ಆ ಬಗ್ಗೆ ಮಾತನಾಡುವುದು ಅಪ್ರಸ್ತುತ, ಅನಾವಶ್ಯಕ, ಅನಗತ್ಯ ಎಂದರು.
ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ದಲಿತ ಸಚಿವರ ರಹಸ್ಯ ಸಭೆ ನಡೆದಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ, ಅವರು ಯಾವಾಗಲೂ ಸಭೆ ಸೇರಿ ಚರ್ಚೆ ನಡೆಸುತ್ತಿರುತ್ತಾರೆ. ಅವರೆಲ್ಲ ಸ್ನೇಹಿತರು, ಹಾಗೆ ಅವರು ಸೇರಿ ಮಾತನಾಡಿದ್ದಾರೆ. ಅದಕ್ಕೆ ಬೇರೆ ಬಣ್ಣ ಕೊಡುವುದು, ಕತೆ ಕಟ್ಟುವುದು ಸರಿಯಲ್ಲ ಎಂದರು.
ಎಸ್‌ಐಟಿ ತನಿಖೆ ಬಗ್ಗೆ ಪೂರ್ಣ ವಿಶ್ವಾಸ:-
ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಯಾವುದೇ ಹಸ್ತಕ್ಷೇಪ ಇಲ್ಲದೆ, ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ. ಯಾವುದೇ ಒತ್ತಡಕ್ಕೆ ಮಣಿಯಬೇಕಿಲ್ಲ. ನನಗೆ ಎಸ್‌ಐಟಿ ತನಿಖೆ ಬಗ್ಗೆ ಪೂರ್ತಿ ವಿಶ್ವಾಸವಿದೆ. ನನಗಿರುವ ಮಾಹಿತಿಯಂತೆ ಸ್ವಲ್ಪಮಟ್ಟಿನ ಷಡ್ಯಂತರ ನಡೆದಿದೆ. ಈ ಬಗ್ಗೆ ಯಾವ ಸಾಕ್ಷ್ಯ ಇದೆ ಎಂಬುದನ್ನು ಎಸ್‌ಐಟಿ ಹೇಳಬೇಕಿದೆ. ಅಗತ್ಯವಿದ್ದರೆ ಎಸ್‌ಐಟಿ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಡಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದೆಯೇ ಎಂಬ ಪ್ರಶ್ನೆಗೆ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ದೀರ್ಘಕಾಲದಿಂದ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದು, ಪ್ರಸ್ತುತ ಮೆಸ್ಕಾಂ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷರ ಬದಲಾವಣೆ ಕುರಿತಂತೆ ಪಕ್ಷದ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಉತ್ತರಿಸಿದರು.







