ತೋಕೂರು ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವದಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ: ಆರೋಪ

ಹಳೆಯಂಗಡಿ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ತೋಕೂರು ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವದಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅಂಗಡಿ ಸ್ಟಾಲ್‌ಗಳನ್ನು ಹಾಕಲು ನಿರ್ಬಂಧ ಹೇರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತೀ ವರ್ಷದಂತೆ ಈ ವರ್ಷವೂ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ನಡೆಯುತ್ತಿದೆ. ಈ ಸಂದರ್ಭ ಅಂಗಡಿ ಸ್ಟಾಲ್‌ಗಳನ್ನು ಹಾಕುವ ಸಲುವಾಗಿ ಮುಸ್ಲಿಮ್ ವ್ಯಾಪಾರಿಗಳು ದೇವಸ್ಥಾನದ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಇನ್ನೆರಡು ದಿನಗಳಲ್ಲಿ ಸ್ಥಳ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಬಳಿಕ ರಾತ್ರಿಯಲ್ಲೇ ಸ್ಥಳ ವಿತರಣೆ ಮಾಡಲಾಗಿದೆ. ಸ್ಟಾಲ್ ಹಾಕಲು ಸ್ಥಳಾವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಿದಾಗ ಹಿಂದೂಯೇತರರಿಗೆ ನೀಡಲಾಗುವುದಿಲ್ಲ ಎಂದು ಆಡಳಿತ ಮಂಡಳಿ ನಮ್ಮನ್ನು ಹಿಂದೆ ಕಳುಹಿಸಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಾಧಿಕಾರಿ ಹಾಗೂ ಮುಲ್ಕಿ ತಹಶೀಲ್ದಾರ್, ದೇವಸ್ಥಾನದ ಜಾಗದಲ್ಲಿ ಹಿಂದೂಗಳು ಹೊರತುಪಡಿಸಿ ಉಳಿದವರು ಅಂಗಡಿಮುಂಗಟ್ಟುಗಳನ್ನು ತೆರೆಯಲು ಅವಕಾಶವಿಲ್ಲ. ಆದರೆ ದೇವಸ್ಥಾನದ ಜಾಗ ಹೊರತುಪಡಿಸಿ ಇತರೆಡೆಗಳಲ್ಲಿ ಯಾರು ಬೇಕಾದರೂ ಅಂಗಡಿ ಮುಂಗಟ್ಟುಗಳನ್ನು ಹಾಕುವುದಕ್ಕೆ ದೇವಸ್ಥಾನದಿಂದ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನದಲ್ಲಿ ಈ ರೀತಿ ತಾರತಮ್ಯ ಎಷ್ಟು ಸರಿ ಎಂಬ ಪ್ರಶ್ನೆಗೆ ನಮಗೆ ಉಪ ಆಯಕ್ತರ ಆದೇಶ ಬಂದಿದೆ. ಹಾಗಾಗಿ ಈ ಕ್ರಮ ವಹಿಸಲಾಗಿದೆ ಎಂದು ತಹಶೀಲ್ದಾರ್ ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಸಂಜೆ ಈ ವಿಚಾರವಾಗಿ ದೇವಳದ ಆಡಳಿತಾಧಿಕಾರಿ ಹಾಗೂ ಮುಲ್ಕಿ ತಾಲೂಕಿನ ಉಪ ತಹಶೀಲ್ದಾರ್ ದಿಲೀಪ್ ರೋಡ್ಕರ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ದೇವಸ್ಥಾನದ ಹೊರಭಾಗದಲ್ಲಿ ಹಿಂದೂಯೇತರರು ಅಂಗಡಿ ಮಳಿಗೆಗಳನ್ನು ಹಾಕಿದ್ದಾರೆ. ಅದಕ್ಕೆ ಅಡ್ಡಿಪಡಿಸಿಲ್ಲ ಎಂದು ತಿಳಿಸಿದ್ದಾರೆ.
"ಜಾತ್ರಾ ಸಂದರ್ಭ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಸಂಘಟನೆಯೊಂದು ಆಡಳಿತ ಸಮಿತಿ ಮತ್ತು ನನಗೆ ಮನವಿ ಸಲ್ಲಿಸಿತ್ತು. ಈ ಸಂಬಂಧ ಪೊಲೀಸ್ ಅಧಿಕಾರಿಗಳು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಆಡಳಿತಾಧಿಕಾರಿ ಜೊತೆ ಸಭೆ ನಡೆಸಿದ್ದರು. ಈ ಹಿಂದಿನಂತೆ ಷಷ್ಠಿ ಮಹೋತ್ಸವ ನಡೆಸುವಂತೆ ಆಡಳಿತಾಧಿಕಾರಿಗೆ ಸೂಚನೆ ನೀಡಿದ್ದೆ. ಇಂತಹ ಸಮಸ್ಯೆಗಳು ಇರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಆಡಳಿತಾಧಿಕಾರಿಯಿಂದ ಮಾಹಿತಿ ಕೇಳಿ ಮುಂದಿನ ಕ್ರಮ ಜರಗಿಸಲಾಗುವುದು".
-ಪ್ರದೀಪ್ ಕುರುಡೇಕರ್, ಪ್ರಭಾರ ತಹಶೀಲ್ದಾರ್, ,ಮುಲ್ಕಿ ತಾಲೂಕು
"ತೋಕೂರು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ನವರು ಹಿಂದೂಯೇತರರಿಗೆ ಸಂತೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಆಡಳಿತ ಸಮಿತಿಗೆ ಮನವಿ ಸಲ್ಲಿಸಿರುವುದು ತಿಳಿದಿದೆ. ಆದರೆ, ಅವಕಾಶ ನಿರಾಕರಿಸಿರುವುದು ತಿಳಿದಿಲ್ಲ. ಈ ಬಗ್ಗೆ ವ್ಯಾಪಾರಸ್ಥರೂ ನಮ್ಮ ಗಮನಕ್ಕೆ ತಂದಿಲ್ಲ. ಅಲ್ಲಿನ ದೇವಸ್ಥಾನದ ಆಡಳಿತ ಸಮಿತಿ ಸಂಪೂರ್ಣ ಬಿಜೆಪಿ ಬೆಂಬಲಿತರಿಂದ ಕೂಡಿದೆ. ರಾಜ್ಯದ ಎಲ್ಲ ದೇವಸ್ಥಾನಗಳೂ ಸೌಹಾರ್ದದ ಕೇಂದ್ರಗಳೇ ಆಗಿದ್ದು, ಸೌಹಾರ್ದ ಕೆಡಿಸುವವರ ವಿರುದ್ಧ ಜಿಲ್ಲಾಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು".
-ಮೋಹನ್ ಕೋಟ್ಯಾನ್, ಅಧ್ಯಕ್ಷರು, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ
"ಧಾರ್ಮಿಕ ದತ್ತಿ ಇಲಾಖೆ ಸಂಪೂರ್ಣ ಕೋಮುವಾದಿಗಳ ಕೈಯಲ್ಲಿದೆ. ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲೇ ಇಂತಹಾ ತಾರತಮ್ಯ ನಡೆಯುತ್ತಿದ್ದರೂ ಜಿಲ್ಲಾಡಳಿತ ಕೈಕಟ್ಟಿ ಕೂತಿದೆ. ಇದು ಜಿಲ್ಲಾಡಳಿತವನ್ನು ಸಂಘಪರಿವಾರ ತನ್ನ ನಿಯಂತ್ರಣದಲ್ಲಿ ಇಟ್ಟಿದೆ ಎಂಬುದಕ್ಕೆ ಸಾಕ್ಷಿಯಂತಿದೆ. ಜಾತ್ರೆ ವ್ಯಾಪಾರಿಗಳು ಎಲ್ಲ ರೀತಿಯಲ್ಲೂ ಬಡವರು. ವ್ಯಾಪಾರಿಗಳು ಜಾತ್ರೆಗಳಲ್ಲಿ ವ್ಯಾಪಾರ ಮಾಡುವುದನ್ನು ನಿರಾಕರಿಸುವ ಮೂಲಕ ಅವರ ಬದುಕುವ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವಾಗಲೂ ಈ ರೀತಿಯ ಪ್ರಕರಣಗಳು ನಡೆಯುತ್ತಿರುವುದು ಖೇದಕರ".
-ಬಿ.ಕೆ.ಇಮ್ತಿಯಾಝ್. ದ.ಕ. ಮತ್ತು ಉಡುಪಿ ಜಿಲ್ಲಾ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಸಂಚಾಲಕ







