ಶಿಕ್ಷಣ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ: ಸಚಿವ ಝಮೀರ್ ಅಹ್ಮದ್ ಖಾನ್
ಮಿತ್ತೂರು ಪ್ರೌಢಶಾಲಾ ಕಟ್ಟಡದ ಉದ್ಘಾಟನೆ

ಬಂಟ್ವಾಳ : ಶಿಕ್ಷಣ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ದ.ಕ.ಜಿಲ್ಲಾಡಳಿತದ ವತಿಯಿಂದ ಪ್ರಧಾನಮಂತ್ರಿ ಜನ ವಿಕಾಸ ಯೋಜನೆಯಡಿ ಬಂಟ್ವಾಳ ತಾಲೂಕಿನ ಮಿತ್ತೂರು ದಾರುಲ್ ಇರ್ಶಾದ್ ಕೆ.ಜಿ.ಎನ್. ಕ್ಯಾಂಪಸ್ ನಲ್ಲಿ ನಿರ್ಮಿಸಲಾದ ಪ್ರೌಢಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲರೂ ಶಿಕ್ಷಣ ಪಡೆಯಬೇಕು ಎಂದ ಅವರು ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ವೇತನದಂತಹ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ರದ್ದುಪಡಿಸಿದೆ. ಆದರೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಿದೆ, ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ 5 ಲಕ್ಷದಷ್ಟು ಸಹಾಯ ಧನ ವಿತರಿಸಲಿದ ಎಂದರು.
ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಮಾತನಾಡಿ ಯುವ ಶಕ್ತಿಯ ಸದ್ಬಳಕೆಯಿಂದ ಬಲಿಷ್ಠ, ಸದೃಡ ಭಾರತದ ನಿರ್ಮಾಣ ಸಾಧ್ಯ, ದ್ವೇಷ ಮತ್ತು ದುಶ್ಚಟ ಮುಕ್ತ ದೇಶದ ನಿರ್ಮಾಣಕ್ಕೆ ಪ್ರತಿಯೋರ್ವರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು.
ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ದು:ಹಾ ನೆರವೇರಿಸಿದರು. ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಶಾಫಿ ಸಅದಿ ಪ್ರಸ್ತಾವನೆಗೈದರು.
ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್ ಕೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಜಿಲ್ಲಾ ಅಧಿಕಾರಿ ಜಿನೇಂದ್ರ ಎಂ, ವಕ್ಫ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಎಂ, ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಮಂಜುನಾಥ ಆರ್, ಮಿತ್ತೂರು ದಾರುಲ್ ಇರ್ಶಾದ್ ಎಜ್ಯುಕೇಶನ್ ಸೆಂಟರ್ ಮೆನೇಜಿಂಗ್ ಡೈರೆಕ್ಟರ್ ಶರೀಫ್ ಸಖಾಫಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಅಶ್ರಫ್ ಬಿ.ಸಿ.ರೋಡ್, ಗಂಡಿಬಾಗಿಲು ಸಿಯೋನ್ ಆಶ್ರಮದ ಫಾದರ್ ಫೌಲೂಸ್, ಪ್ರಮುಖರಾದ ಜಿ.ಎ.ಬಾವ, ಎಂ.ಎಸ್. ಮುಹಮ್ಮದ್, ಟಿ.ಎಂ.ಶಹೀದ್, ಡಾ.ರಾಜಾರಾಮ್, ಕೆ.ಬಿ.ಕಾಸಿಂ ಹಾಜಿ ಮಿತ್ತೂರು, ನೂರುದ್ದೀನ್ ಸಾಲ್ಮರ, ನಾಸಿರ್ ಕೋಲ್ಪೆ, ಸಾಬ ಕಬಕ ಮೊದಲಾದವರು ಭಾಗವಹಿಸಿದ್ದರು.







