ನ.1-10: ‘ದ್ವೇಷ ಅಳಿಸೋಣ, ದೇಶ ಉಳಿಸೋಣ’ ಅಭಿಯಾನ

ಮಂಗಳೂರು, ಅ.31: ರಾಜ್ಯದಲ್ಲಿ ಶಾಂತಿ-ಸೌಹಾರ್ದತೆಗಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ನ.1ರಿಂದ 10ರವರೆಗೆ ‘ದ್ವೇಷ ಅಳಿಸೋಣ, ದೇಶ ಉಳಿಸೋಣ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ.ಜಿಲ್ಲಾ ಘಟಕದ ಕೋಶಾಧಿಕಾರಿ ಆಸೀಫ್ ಇಕ್ಬಾಲ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕುಗ್ಗುತ್ತಿ ರುವ ರಾಜಕೀಯ ಸ್ಥಾನ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಈಗಿನ ಸನ್ನಿವೇಶದಲ್ಲಿ ಮೌಲ್ಯ ಧಾರಿತ ರಾಜಕೀಯದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಪ್ರೀತಿ, ಶಾಂತಿ ಸಹೋದರತೆ ಬಯಸುವ ನಾಗರಿಕರಿಗೆ ಒಗ್ಗೂಡಿಸಿ ದ್ವೇಷ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ಧ್ವನಿ ಎತ್ತಲು ಪ್ರೇರೇಪಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.
ನ.1ರಂದು ರಾಜ್ಯ ಕಚೇರಿ ಮತ್ತು ರಾಜ್ಯದ ಎಲ್ಲ ಘಟಕಗಳಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣದ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಅಭಿಯಾನದ ಅಂಗವಾಗಿ ಭಿತ್ತಿಪತ್ರ ಬಿಡುಗಡೆ, ಸಾರ್ವಜನಿಕ ಸಭೆ, ಬೀದಿ ನಾಟಕ, ಜಾಥಾ, ಬೈಕ್ ರ್ಯಾಲಿ, ರಾಷ್ಟ್ರಪತಿಗೆ ಮನವಿ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಅಧ್ಯಕ್ಷ ಸರ್ಫರಾಝ್, ಉಪಾಧ್ಯಕ್ಷ ದಿವಾಕರ ರಾವ್, ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಮುನೀರ್ ಪದರಂಗಿ , ಜಿಲ್ಲಾ ವಕ್ತಾರ ಎಸ್.ಎಂ ಮುತ್ತಲಿಬ್ ಉಪಸ್ಥಿತರಿದ್ದರು.







