ನ.5ರಂದು ಸಾಂತ್ವನದ ಸಂಚಾರ- ‘ಎ ಡೇ ವಿಥ್ ಬೆಡ್ ರಿಡನ್’

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಇದರ ವತಿಯಿಂದ ನ.5ರಂದು ಸಾಂತ್ವನದ ಸಂಚಾರ- ಎ ಡೇ ವಿಥ್ ಬೆಡ್ ರಿಡನ್ ಎಂಬ ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೋಸ್ಟಲ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಶರೀಫ್ ಅಬ್ಬಾಸ್ ವಳಾಲ್ ತಿಳಿಸಿದರು.
ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆ ಬೆಳಗ್ಗೆ 9ಕ್ಕೆ ನಗರದ ಬಿ.ಎಂ.ಎಸ್ ಹೋಟೆಲ್‌ನಲ್ಲಿ ಜರುಗಲಿದ್ದು ಮುಖ್ಯ ಅತಿಥಿಗಳಾಗಿ ಮಂಗಳೂರು ಪೊಲೀಸ್ ಕಮಿಷನರೇಟ್‌ನ ದಕ್ಷಿಣ ವಿಭಾಗದ ಎ.ಸಿ.ಪಿ ಮಹೇಶ್ ಕುಮಾರ್, ಬಿ.ಎಂ.ಎಸ್ ಹೋಟೆಲ್‌ನ ಕೆ.ಜಯೇಶ್ ಬಳ್ಳಾಲ್ ಭಾಗವಹಿಸಲಿದ್ದಾರೆ ಎಂದರು.
ಸಾಂತ್ವನ ಸಂಚಾರ ಕಾರ್ಯಕ್ರಮ ಒಂದು ವಿಶೇಷ ಕಾರ್ಯಕ್ರಮವಾಗಿದೆ. ಅನಿರೀಕ್ಷಿತ ದುರ್ಘಟನೆಯಿಂದಾಗಿ ಹಲವಾರು ವರ್ಷಗಳಿಂದ ಹೊರ ಪ್ರಪಂಚ ನೋಡದೆ ಮನೆಯಲ್ಲಿಯೇ ಹಾಸಿಗೆ ಹಿಡಿದಿರುವ 5 ರೋಗಿಗಳ ಕುಟುಂಬದೊಂದಿಗೆ ಒಂದು ದಿನ ಕಳೆಯುವ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಿಲಿಕುಲ ನಿಸರ್ಗಧಾಮ ಭೇಟಿ, ಬಳಿಕ ತನ್ನೀರು ಬಾವಿ ಸಮುದ್ರ ಕಿನಾರೆ ವಿಹಾರದ ನಂತರ ಬೋಟಿಂಗ್ ನಡೆಯಲಿದೆ. ಅಲ್ಲದೆ ನೆಕ್ಸಸ್ ಫಾರಂ ಫಿಝಾ ಮಾಲ್‌ಗೆ ಕರೆದುಕೊಂಡು ಹೋಗಲಿದ್ದೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಮಾರೋಪ ಸಂಜೆ 7 ಗಂಟೆಗೆ ನೆಕ್ಸಸ್ ಫಾರಂ ಫಿಝಾ ಮಾಲ್‌ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸಂಘದ ವತಿಯಿಂದ 15 ಮೆಡಿಕಲ್ ಬೆಡ್‌ಗಳನ್ನು ಅಗತ್ಯವಿರುವ ರೋಗಿಗಳಿಗೆ ನೀಡಲಾಗುವುದು ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೋಸ್ಟಲ್ ಫ್ರೆಂಡ್ಸ್ ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್, ಫೈಝಲ್ ರೆಹಮಾನ್, ಕಾರ್ಯದರ್ಶಿ ರಿಯಾಝ್ ಕಣ್ಣೂರು, ಸಾಂತ್ವನದ ಸಂಚಾರದ ಸಂಚಾಲಕ ಶೌಕತ್ ಅಲಿ, ಟ್ರಸ್ಟಿ ಸೂಫಿಕರ್ ಖಾಸಿಂ ಉಪಸ್ಥಿತರಿದ್ದರು.







