ಅ. 5,6 : CITU 18ನೇ ದ.ಕ.ಜಿಲ್ಲಾ ಸಮ್ಮೇಳನ

ಮಂಗಳೂರು: ಕಾರ್ಮಿಕ ಕಾನೂನುಗಳ ರಕ್ಷಣೆಗಾಗಿ, ಕನಿಷ್ಟ ಕೂಲಿ,ಪಿಂಚಣಿ ಸಾಮಾಜಿಕ ಭದ್ರತೆಗಾಗಿ,ಜಿಲ್ಲೆಯ ಸೌಹಾರ್ದತಾ ಪರಂಪರೆಯ ಉಳಿವಿಗಾಗಿ ಎಂಬ ಘೋಷವಾಕ್ಯದೊಂದಿಗೆ ಕೇಂದ್ರ ಕಾರ್ಮಿಕ ಸಂಘಟನೆಯಾದ CITUನ 18ನೇ ದ.ಕ.ಜಿಲ್ಲಾ ಸಮ್ಮೇಳನವು ಅಕ್ಟೊಬರ್ 5 ಮತ್ತು 6ರಂದು ಎರಡು ದಿನಗಳ ಕಾಲ ಬೋಳಾರದಲ್ಲಿರುವ ಎಸ್ ಕೆ ಟೈಲ್ ವರ್ಕರ್ಸ್ ಯೂನಿಯನ್ ನ ಸಭಾಂಗಣದಲ್ಲಿ ಜರುಗಲಿದೆ.
ಮೊದಲ ದಿನವಾದ ಅಕ್ಟೋಬರ್ 5ರಂದು ಬೆಳಿಗ್ಗೆ 10ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭವು ಜರುಗಲಿದ್ದು,ಉದ್ಘಾಟನೆಯನ್ನು CITU ರಾಜ್ಯ ಉಪಾಧ್ಯಕ್ಷರಾದ ಡಾ.ಕೆ.ಪ್ರಕಾಶ್ ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ CITU ರಾಜ್ಯ ಕಾರ್ಯದರ್ಶಿಗಳಾದ ಎನ್ ಪ್ರತಾಪ್ ಸಿಂಹರವರು ಭಾಗವಹಿಸಲಿದ್ದಾರೆ. CITU ದ.ಕ.ಜಿಲ್ಲಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿಯವರು ಪ್ರಾರಂಭದಲ್ಲಿ ಧ್ವಜಾರೋಹಣಗೈಯ್ಯುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದ ಬಳಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಲಿರುವರು. ಸಮ್ಮೇಳನ ನಡೆಯುವ ಸ್ಥಳಕ್ಕೆ ಕಾಂ. ಗಂಗಯ್ಯ ಅಮೀನ್ ವೇದಿಕೆಯೆಂದೂ,ಕಾಂ. ರತ್ನಾಕರ ಶೆಣೈ ನಗರವೆಂದು ನಾಮಕರಣ ಮಾಡಲಾಗಿದೆ.
ಎರಡು ದಿನಗಳ ಕಾಲವೂ ಪ್ರತಿನಿಧಿ ಅಧಿವೇಶನ ನಡೆಯಲಿದ್ದು, ಜಿಲ್ಲೆಯಾದ್ಯಂತ ವಿವಿಧ ವಿಭಾಗದ ಕಾರ್ಮಿಕ ಸಂಘಟನೆಗಳಿಂದ ಆಯ್ಕೆಯಾಗಿ ಬರುವ 200ಕ್ಕೂ ಮಿಕ್ಕಿದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಾರ್ಮಿಕ ವರ್ಗದ ಮೇಲೆ ಆಳುವ ವರ್ಗಗಳು ನಡೆಸಿರುವ ದಾಳಿಗಳು, ಅದನ್ನೆದುರಿಸಿದ ಕಾರ್ಮಿಕರ ಹೋರಾಟಗಳು ಹಾಗೂ ಮುಂದಿನ ಸವಾಲುಗಳ ಬಗ್ಗೆ ಕರಡು ವರದಿ ಮಂಡನೆಯಾಗಲಿದ್ದು,ಬಳಿಕ ಚರ್ಚೆಗಳು ನಡೆಯಲಿದೆ.
ಮುಂದಿನ ಮೂರು ವರ್ಷಗಳ ಕಾಲ ದ.ಕ.ಜಿಲ್ಲೆಯಲ್ಲಿ ಬಲಿಷ್ಠ ಕಾರ್ಮಿಕ ಚಳುವಳಿಯನ್ನು ಕಟ್ಟಲು ಹಾಗೂ ಜಿಲ್ಲೆಯ ಸೌಹಾರ್ದತಾ ಪರಂಪರೆಯನ್ನು ಉಳಿಸಲು ಧೃಢವಾದ ಪ್ರತಿಜ್ಞೆಯನ್ನು ಸಮ್ಮೇಳನವು ಕೈಗೊಳ್ಳಲಿದೆ.ಇದಕ್ಕೆ ಸಂಬಂಧಿಸಿದ ಹಲವಾರು ನಿರ್ಣಯಗಳನ್ನು ಕೂಡ ಕೈಗೊಳ್ಳಲಿದೆ. ಬಳಿಕ ನೂತನ ನಾಯಕತ್ವವನ್ನು ಸಮ್ಮೇಳನವು ಆಯ್ಕೆಗೊಳಿಸಲಿದೆ. ಅಕ್ಟೋಬರ್ 6ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭವು ಜರುಗಲಿದೆ ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







