ಅ.8ರಂದು 'ಐಟಾ' ದ.ಕ. ಜಿಲ್ಲಾ ಶೈಕ್ಷಣಿಕ ಸಮ್ಮೇಳನ

ಮಂಗಳೂರು, ಅ.6: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್(ಐಟಾ) ಶಿಕ್ಷಕರ ರಾಷ್ಟ್ರ ಮಟ್ಟದ ಸಂಘಟನೆ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನದ ಅಂಗವಾಗಿ ಅ.8ರಂದು ದ.ಕ. ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ನಗರದ ಪ್ರೆಸ್ಕ್ಲಬ್ ನಲ್ಲಿ ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ ಐಟಾ ಉಳ್ಳಾಲದ ಅಧ್ಯಕ್ಷ ಡಾ.ಮುಹಮ್ಮದ್ ಮುಬೀನ್, ಅಂದು ಬೆಳಗ್ಗೆ 9:30ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಹಿರಾ ಕಾಲೇಜಿನ ಸಭಾಂಗಣದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಐಟಾ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದರು.
ನಡುಪದವಿನ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಸರ್ಫಾಝ್ ಜೆ ಹಾಶಿಂ ಶೈಕ್ಷಣಿಕ ಮಾರ್ಗದರ್ಶನ ಮಾಡುವರು. ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಬದ್ರಿಯಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎನ್.ಇಸ್ಮಾಯೀಲ್, ಹಿರಾ ಮಹಿಳಾ ಕಾಲೇಜು ಪ್ರಾಂಶುಪಾಲೆ ಫಾತಿಮ ಮೆಹರೂನ್, ಸಮನ್ವಯ ಶಿಕ್ಷಕರ ಸಂಘ ದ.ಕ. ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
‘ಆದರ್ಶ ಶಿಕ್ಷಕ-ತಮ್ಮ ಅನುಭವದ ಆಧಾರದಲ್ಲಿ' ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದ್ದು, ಇದರಲ್ಲಿ ಕೋಟೆಪುರ ಟಿಪ್ಪು ಸುಲ್ತಾನ್ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಚ್.ಮಲಾರ್, ಸರಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಬಿ. ಮುಹಮ್ಮದ್ ತುಂಬೆ, ಸಜೀಪ ಮೂಡ ಸರಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಅಮಾನುಲ್ಲಾಹ್ ಖಾನ್ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಹತ್ತು ಮಂದಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಗುವುದು. ಅಭಿನಂದನಾ ಭಾಷಣವನ್ನು ಹಳೆಕೋಟೆ ಸೈಯದ್ ಮದನಿ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ.ಮಂಜನಾಡಿ ನಿರ್ವಹಿಸುವರು. ಸಮ್ಮೇಳನದಲ್ಲಿ ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಪಾಲಕರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಐಟಾ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಹನೀಫ್, ಐಟಾ ಉಳ್ಳಾಲ ಕಾರ್ಯದರ್ಶಿ ಕೆ.ಎಂ.ಕೆ.ಮಂಜನಾಡಿ, ಹಿರಾ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ರಹ್ಮತುಲ್ಲಾ ಉಪಸ್ಥಿತರಿದ್ದರು.







