ಅ.5ರಿಂದ 12: ವಕ್ರದಂತ ಚಿಕಿತ್ಸಾ ಸಪ್ತಾಹ

ಮಂಗಳೂರು, ಅ.4: ಇಂಡಿಯನ್ ಆರ್ತೋಡಾಂಟಿಕ್ ಸೊಸೈಟಿ ಹಾಗೂ ಮಂಗಳೂರು ಆರ್ತೋಡಾಂಟಿಕ್ ಸ್ಟಡಿ ಗ್ರೂಪ್ ಸಂಸ್ಥೆಗಳ ಸಹಯೋಗದಲ್ಲಿ ಅ. 5ರಿಂದ 12ರವರೆಗೆ ವಕ್ರದಂತ ಚಿಕಿತ್ಸಾ ಸಪ್ತಾಹವನ್ನು ಆಯೋಜಿಸಲಾಗುತ್ತಿದೆ ಎಂದು ಪ್ರೊ. ಡಾ. ಅಕ್ತರ್ ಹುಸೇನ್ ತಿಳಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸಪ್ತಾಹದ ಅಂಗವಾಗಿ ವಕ್ರದಂತ ಚಿಕಿತ್ಸೆಯ ಕುರಿತು ಬ್ಯಾನರ್ ಬಿಡುಗಡೆ, ಬೀಚ್ ಸ್ವಚ್ಛಗೊಳಿಸುವುದು, ಇಎನ್‌ಟಿ ಹಾಗೂ ಮಕ್ಕಳ ತಜ್ಞರ ಒಳಗೊಂಡ ಕಲಿಕಾ ಪ್ರಕ್ರಿಯೆಗಳು, ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ಬಹುಮಾನ ವಿತರಣೆ, ಮ್ಯಾರಥಾನ್ ಹಾಗೂ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪ್ರಸ್ತುತ ಆನ್‌ಲೈನ್ ಮೂಲಕವೂ ವಕ್ರದಂತ ಚಿಕಿತ್ಸೆಯು ನಡೆಯುತ್ತಿದೆ. ಈ ಬಗ್ಗೆ ಜಾಹೀರಾತುಗಳು ಕೂಡಾ ಪ್ರಕಟವಾಗುತ್ತಿವೆ. ಆದರೆ, ವಕ್ರದಂತ ವಿಶೇಷ ತಜ್ಞರು ಈ ವಿಷಯದಲ್ಲಿ ಮೂರು ವರ್ಷಗಳ ವಿಶೇಷ ಅಧ್ಯಯನದೊಂದಿಗೆ ಈ ಚಿಕಿತ್ಸೆ ನಡೆಸುತ್ತಾರೆ. ಹಾಗಾಗಿ ಈ ಬಗ್ಗೆ ಜಾಗೃತಿ ಅಗತ್ಯವಾಗಿದೆ. ವಿಶೇಷ ತಜ್ಞರಲ್ಲದವರು ಇಂತಹ ಚಿಕಿತ್ಸೆ ಮಾಡುವುದರಿಂದ ರೋಗಿಗಳಿಗೆ ಅಪಾಯವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಸಂಘವು ಡೆಂಟಲ್ ಕೌನ್ಸಿಲ್ ಸಮಿತಿಗೆ ಪತ್ರದ ಮೂಲಕ ತಿಳಿಸಿದೆ ಎಂದು ಡಾ. ಆಶಿತ್ ಎಂ.ವಿ. ಹಾಗೂ ಡಾ. ಅರ್ಜುನ್ ನಾಯಕ್ ತಿಳಿಸಿದರು.
ಗೋಷ್ಟಿಯಲ್ಲಿ ಡಾ. ಕೆ. ನಿಲ್ಲಾನ್ ಶೆಟ್ಟಿ, ಡಾ. ಸಿದ್ದಾರ್ಥ ಶೆಟ್ಟಿ, ಡಾ. ಮಿಥುನ್ ಕೆ. ಉಪಸ್ಥಿತರಿದ್ದರು.







