ಮೀಫ್ ಸದಸ್ಯತ್ವದ ಕಾಲೇಜುಗಳ ಅರ್ಹ ವಿದ್ಯಾರ್ಥಿಗಳಿಗೆ ಬೆಂಗಳೂರಿನ ವಿವಿಯಿಂದ 30 ಉಚಿತ ಸೀಟುಗಳ ಕೊಡುಗೆ

ಮಂಗಳೂರು, ಆ.27: ಮುಸ್ಲಿಮ್ ಎಜುಕೇಶನಲ್ ಇನ್ ಸ್ಟಿಟ್ಯೂಶನ್ಸ್ ಫೆಡರೇಶನ್(ಮೀಫ್) ಸದಸ್ಯತ್ವ ಹೊಂದಿರುವ ಶಾಲಾ ಕಾಲೇಜುಗಳ ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿರುವ ಅರ್ಹ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಪ್ರತಿಷ್ಠಿತ ಯುನಿವರ್ಸಿಟಿಯೊಂದು ಒಟ್ಟು 30 ಉಚಿತ ಸೀಟುಗಳ ಕೊಡುಗೆಯನ್ನು ಘೋಷಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ, ಇತ್ತೀಚೆಗೆ ಮೀಫ್ ಪದಾಧಿಕಾರಿಗಳ ತಂಡ ಹಮ್ಮಿಕೊಂಡಿದ್ದ ಬೆಂಗಳೂರು ‘ಸ್ಟಡೀ ಟೂರ್’ನ ಸಫಲತೆಯ ಪರಿಣಾಮವಾಗಿ ಬೆಂಗಳೂರಿನ ಹೆಸರಾಂತ ಯುನಿವರ್ಸಿಟಿಯೊಂದು ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು 30 ಉಚಿತ ಸೀಟುಗಳನ್ನು ನೀಡಲು ಸಮ್ಮತಿಸಿದೆ. ಅದರಂತೆ ಹಾಸ್ಟೆಲ್ ಸೌಲಭ್ಯಗಳೊಂದಿಗೆ 21 ಇಂಜಿನಿಯರಿಂಗ್ ಸೀಟುಗಳು, 2 ಕಾನೂನು(ಲಾ) ಸೀಟುಗಳು ಹಾಗೂ 7 ಪದವಿ ಶಿಕ್ಷಣ ವಿಭಾಗದ ಸೀಟುಗಳು ಉಚಿತವಾಗಿ ಲಭಿಸಲಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ (2023-24ನೇ) ಶ್ಯೆಕ್ಷಣಿಕ ವರ್ಷದಿಂದಲೇ ಈ ಕೊಡುಗೆಗಳ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೀಫ್ ಸದಸ್ಯ ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯುಸಿ ಅಥವಾ 12 ನೇ ತರಗತಿ ತೇರ್ಗಡೆಯಾದ ವಿದ್ಯಾರ್ಥಿಗಳು ಹಾಗೂ ಮೀಫ್ ಸದಸ್ಯ ಶಾಲೆಗಳಲ್ಲಿ ಕಲಿತು ಪಿಯುಸಿ ಅಥವಾ 12ನೇ ತರಗತಿಯನ್ನು ಬೇರೆ ಕಾಲೇಜುಗಳಲ್ಲಿ ಕಲಿತವರು ಕೂಡಾ ಈ ಕೊಡುಗೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆದ್ದರಿಂದ ಎಲ್ಲ ಮೀಫ್ ಸದಸ್ಯ ಶಾಲೆ-ಕಾಲೇಜುಗಳ ಅಧಿಕೃತರು ಈ ವರ್ಷ ತೇರ್ಗಡೆಗೊಂಡ ತಮ್ಮ ಸಂಸ್ಥೆಯ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಪಡೆದು ಮೀಫ್ ಪ್ರೋಗ್ರಾಂ ಸೆಕ್ರೆಟರಿಗೆ ಸಂಬಂಧಿತ ಎಲ್ಲ ದಾಖಲೆಗಳೊಂದಿಗೆ ಸೆಪ್ಟಂಬರ್ 2ರ ಒಳಗೆ ಕಳುಹಿಸಬೇಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮೀಫ್ ಪ್ರೋಗ್ರಾಂ ಸೆಕ್ರೆಟರಿ ಶಾರಿಖ್ ಮೊ.ಸಂ.: 7330007313ನ್ನು ಸಂಪರ್ಕಿಸುವಂತೆ ಮೂಸಬ್ಬ ಪಿ. ಬ್ಯಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







