ದೇಶದ ಶಾಂತಿ, ಸೌಹಾರ್ದತೆ, ಭ್ರಾತೃತ್ವವನ್ನು ಕಾಪಾಡಿಕೊಂಡಾಗ ಮಾತ್ರ ಗಣರಾಜ್ಯವನ್ನು ಉಳಿಸಿಕೊಳ್ಳಲು ಸಾಧ್ಯ : ತಹಶೀಲ್ದಾರ್ ಜಿ.ಮಂಜುನಾಥ್

ಬಂಟ್ವಾಳ: ಸರಕಾರ ಹಾಗೂ ಜನರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುವುದು ಸರಕಾರಿ ಉದ್ಯೋಗಿಗಳ ಪ್ರಮುಖ ಕರ್ತವ್ಯವಾಗಿದ್ದು, ನೌಕರರು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸಿದಾಗ ಜನರ ಹಿತದ ಜೊತೆಗೆ ದೇಶದ ಅಭಿವೃದ್ದಿಯೂ ಸಾಧ್ಯವಾಗುತ್ತದೆ ಎಂದು ಬಂಟ್ವಾಳ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಜಿ. ಮಂಜುನಾಥ್ ಹೇಳಿದರು.
ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಬಿ.ಸಿ.ರೋಡ್‌ನ ಆಡಳಿತ ಸೌಧದಲ್ಲಿ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದ ಅವರು, ದೇಶದ ಶಾಂತಿ, ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಕಾಪಾಡಿಕೊಂಡಾಗ ಮಾತ್ರ ನಿಜವಾದ ಗಣರಾಜ್ಯವನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ಯು. ರಾಜೇಶ್ ನಾಯಕ್ ಅವರು ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.
ಗಣರಾಜ್ಯೋತ್ಸವ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದ ಕಾವಳಕಟ್ಟೆ ಶಾಲೆಯ ವಿದ್ಯಾರ್ಥಿನಿ ವಂದನಾ, ಸಂವಿಧಾನದ ಆಶಯಗಳು ಪ್ರತಿಯೊಬ್ಬರ ಧ್ಯೇಯವಾಗಬೇಕು. ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ನಿರ್ಮೂಲನೆಗೆ ಎಲ್ಲರೂ ಕಟಿಬದ್ಧರಾಗಬೇಕೆಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಯೋಧ ಕ್ಯಾ. ಧನಂಜಯ, ಸಮಾಜದಲ್ಲಿ ಆಳವಾಗಿ ಬೇರೂರಿರುವ ಡ್ರಗ್ಸ್ ಮಾಫಿಯಾ ಗಣರಾಜ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಜಾಗರೂಕರಾಗಬೇಕು. ಶಿಕ್ಷಕರು, ಪೋಷಕರು ಹಾಗೂ ಸಮಾಜ ಒಟ್ಟಾಗಿ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ಬುಡಾ ಅಧ್ಯಕ್ಷ ಬೇಬಿ ಕುಂದರ್ ಮತ್ತು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು. ಈ ವೇಳೆ ಮಾಜಿ ಸೈನಿಕರಾದ ಕ್ಯಾ. ಧನಂಜಯ, ಹೆನ್ರಿ ರೋಡ್ರಿಗಸ್, ರಂಗನಾಥ ರೈ, ಮಾಧವ ಕುಲಾಲ್ ಮಾಣಿ, ಮೋಹನ್ ಗೌಡ ಅವರನ್ನು ಸನ್ಮಾನಿಸಲಾಯಿತು.
ಕಬಡ್ಡಿ, ಕರಾಟೆ, ವೈಟ್ ಲಿಫ್ಟಿಂಗ್, ಡಿಸ್ಕಸ್ ಥ್ರೋ, ಈಜು ಸೇರಿದಂತೆ ವಿವಿಧ ಕ್ರೀಡಾ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಪ್ರೀತೇಶ್ ವಿಟ್ಲ, ಚೈತನ್ಯ ಸಾಲೆತ್ತೂರು, ಕೀರ್ತಿ ಕುಕ್ಕಿಲ, ಹೇಮಂತ್ ತೆಂಕ ಕಜೆಕಾರು, ಶಮೀರ್ ಅಬ್ದುಲ್ಲ, ಸಾನ್ವಿ ಕೆ, ಕೃತಿ ನೆಟ್ಲ, ಅನಘ್ರ್ಯ ಬರಿಮಾರು, ಅನನ್ಯ ಬರಿಮಾರು ಹಾಗೂ ಜಾವೆಲಿನ್ ಮತ್ತು ಡಿಸ್ಕಸ್ ಥ್ರೋ ವಿಭಾಗದಲ್ಲಿ ಸಾಧನೆಗೈದ ಶಿಕ್ಷಕಿ ಶ್ರೀಮತಿ ಭಾಗೀರಥಿ ರೈ ಅವರನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಟಾಪರ್ ಆದ ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹಧನ ವಿತರಿಸಲಾಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ವಂದಿಸಿದರು. ಶಿಕ್ಷಕ ಗೋಪಾಕೃಷ್ಣ ಮಾಣಿ ಕಾರ್ಯಕ್ರಮ ನಿರೂಪಿಸಿದರು. ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರೈತ ಗೀತೆ ಹಾಗೂ ನಾಡಗೀತೆ ಹಾಡಿದರು.
ಇದಕ್ಕೂ ಮುನ್ನ ಪೊಲೀಸ್, ಗೃಹರಕ್ಷಕ ದಳ, ಮಾಜಿ ಸೈನಿಕರು, ವಿವಿಧ ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳಿಂದ ಪಥಸಂಚಲನ ನಡೆಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆದವು.







