ಪಿ.ಎ. ಫಾರ್ಮಸಿ ಕಾಲೇಜು ವಾರ್ಷಿಕೋತ್ಸವ 'ಎಪಿಸ್ಟಿಮ್2024'

ದೇರಳಕಟ್ಟೆ: ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಶಿಕ್ಷಣ ಪಡೆದು ಪದವೀಧರನಾಗುವುದರೊಂದಿಗೆ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯ ಎಂದು ಯೆನೆಪೋಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಮುಹಮ್ಮದ್ ಗುಲ್ಝಾರ್ ಅಹ್ಮದ್ ತಿಳಿಸಿದರು.
ಕೊಣಾಜೆ ನಡುಪದವಿನ ಪಿ.ಎ. ಕಾಲೇಜ್ ಆಫ್ ಫಾರ್ಮಸಿಯಲ್ಲಿ 'ಎಪಿಸ್ಟಿಮ್2024' ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ "ಫಾರ್ಮಾ ಏಸ್" ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪಿ.ಎ. ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫ ರಾಝ್ ಜೆ. ಹಾಶಿಂ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ವೃತ್ತಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿ ನಾಮನಿರ್ದೇಶನಗೊಂಡ ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಿ.ಎ. ಮ್ಯಾನೇಜ್‌ಮೆಂಟ್ ಸ್ಟಡೀಸ್ ನ ನಿರ್ದೇಶಕ ಡಾ. ಸಯ್ಯದ್ ಅಮೀನ್ ಅಹ್ಮದ್, ಪಿ.ಎ. ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ಸಜೀಶ್ ರಘುನಾಥನ್, ಪಿ.ಎ. ಪಾಲಿಟೆಕ್ನಿಕ್ ಉಪಪ್ರಾಂಶುಪಾಲ ಪ್ರೊ. ಇಸ್ಮಾಯಿಲ್ ಖಾನ್ ಉಪಸ್ಥಿತರಿದ್ದರು.
ಪಿ.ಎ. ಪಾಲಿಟೆಕ್ನಿಕ್ ಪ್ರಾಂಶುಪಾಲ ಪ್ರೊ. ಕೆ.ಪಿ. ಸೂಫಿ ಶುಭಹಾರೈಸಿದರು. ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ವಾರ್ಷಿಕ ವರದಿಯನ್ನು ಮಂಡಿಸಿದರು.
ಸಾಹಿಲ್ ಇಸ್ಮಾಇಲ್ ಪ್ರಾರ್ಥಿಸಿದರು. ಡಾ. ರಜಿಶಾ ಸ್ವಾಗತಿಸಿದರು. ಡಾ. ಮುಹಮ್ಮದ್ ಮುಬೀನ್ ವಂದಿಸಿದರು. ಧನ್ಯಾ ಮತ್ತು ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.







