MANGALURU | ಪಿ.ಎ. ಶಿಕ್ಷಣ ಸಂಸ್ಥೆಯಿಂದ 'ಪೇಸ್ ಸಿಲ್ವಥಾನ್' ಮಾದಕ ವಸ್ತು ವಿರೋಧಿ ಜಾಗೃತಿ ಮ್ಯಾರಥಾನ್

ಮಂಗಳೂರು: ನಡುಪದವಿನಲ್ಲಿರುವ ಪಿ. ಎ. ಕಾಲೇಜ್ ಆಫ್ ಫಾರ್ಮಸಿ ಹಾಗೂ ಪಿ. ಎ. ಇನ್ ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಸಂಸ್ಥೆಗಳ ವತಿಯಿಂದ ಪೇಸ್ ಶಿಕ್ಷಣ ಸಂಸ್ಥೆಯ ಬೆಳ್ಳಿಹಬ್ಬ 'ಪೇಸ್ ಸಿಲ್ವಿಯೋರಾ 25'ರ ಅಂಗವಾಗಿ ಮಾದಕ ವಸ್ತು ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ರವಿವಾರ 'ಪೇಸ್ ಸಿಲ್ವಥಾನ್ 2025 – ಡ್ರಗ್ಸ್ ವಿರೋಧಿ ಜಾಗೃತಿ ಮ್ಯಾರಥಾನ್' ಹಮ್ಮಿಕೊಳ್ಳಲಾಗಿತ್ತು.
ಇಂದು ಬೆಳಗ್ಗೆ 7:30ಕ್ಕೆ ಮಂಗಳೂರು ಪುರಭವನದಿಂದ ಉರ್ವಾ ಮೈದಾನದವರೆಗೆ ಮ್ಯಾರಥಾನ್ ನಡೆಯಿತು. ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಸೂಪರಿಂಟೆಂಡೆಂಟ್ ಡಾ.ಡಿ.ಎಸ್. ಶಿವಪ್ರಕಾಶ್ ಮ್ಯಾರಥಾನ್ ಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಮಾದಕ ವಸ್ತು ಸೇವನೆಯಿಂದ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ ಎಚ್ಚರ ವಹಿಸಬೇಕು, ಪ್ರತಿಯೊಬ್ಬರೂ ಅಮಲು ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಪಿ. ಎ. ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ರಮೀಝ್ ಎಂ.ಕೆ., ಪಿ. ಎ. ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ.ಸಲೀಮುಲ್ಲಾ ಖಾನ್, ಪಿ. ಎ. ಇನ್ ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲೆ ಡಾ. ಅಫೀಫ ಸಲೀಮ್, ಪಿಎಇಟಿ ಕ್ಯಾಂಪಸ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಶರ್ಫುದ್ದೀನ್ ಪಿ. ಕೆ., ಪಿ. ಎ. ಕಾಲೇಜ್ ಆಫ್ ಫಾರ್ಮಸಿಯ ಉಪ ಪ್ರಾಂಶುಪಾಲ ಡಾ. ಮುಹಮ್ಮದ್ ಮುಬೀನ್, ಪಿಎಇಟಿ ಪರ್ಚೇಸ್ ಮ್ಯಾನೇಜರ್ ಹಾರಿಸ್ ಟಿ. ಡಿ. ಉಪಸ್ಥಿತರಿದ್ದರು.
ಮ್ಯಾರಥಾನ್ನಲ್ಲಿ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದರು. ಗುರಿ ಮುಟ್ಟಿದ ಪ್ರಥಮ 25 ಪುರುಷರು ಹಾಗೂ 25 ಮಹಿಳೆಯರಿಗೆ ಪದಕಗಳನ್ನು ನೀಡಿ ಪುರಸ್ಕರಿಸಲಾಯಿತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರು.







