ಪಚ್ಚನಾಡಿ | ಶಾಲಾ ವಿದ್ಯಾರ್ಥಿಗಳಿಂದ ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

ಮಂಗಳೂರು, ಡಿ.4: ವಿದ್ಯಾರ್ಥಿ ದೆಸೆಯಲ್ಲೇ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಂದೆಲ್ ಎಂಜಿಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ಪಚ್ಚನಾಡಿ ಪೌರ ಕಾರ್ಮಿಕರಿಗೆ ಆಹಾರ ದಿನಸಿ ಹಾಗೂ ದೈನಂದಿನ ಸೊತ್ತುಗಳ ಕಿಟ್ಗಳನ್ನು ಬುಧವಾರ ವಿತರಿಸಿದರು.
ಪಚ್ಚನಾಡಿ ಬಸವಲಿಂಗಪ್ಪನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಎಂಜಿಸಿ ಶಾಲಾ ವಿದ್ಯಾರ್ಥಿಗಳು ಸ್ಥಳೀಯ ಪೌರ ಕಾರ್ಮಿಕರ ಕುಟುಂಬಗಳ ಜೊತೆ ಸಂಗೀತ ಮತ್ತು ನೃತ್ಯ ಮಾಡಿ ಸಂಭ್ರಮಿಸಿದರು.ಈ ವೇಳೆ ವಿದ್ಯಾರ್ಥಿಗಳು 50 ಕುಟುಂಬಗಳಿಗೆ ಆಹಾರ ದಿನಸಿ, ದಿನಬಳಕೆ ಸೊತ್ತಿನ ಕಿಟ್ ವಿತರಿಸಿ, ತಮ್ಮ ಶೈಕ್ಷಣಿಕ ಜೀವನ ಯಶಸ್ವಿಗೆ ಪೌರ ಕಾರ್ಮಿಕರಿಂದ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭ ಸಮಾಜ ಸೇವಕ ಮೋಹನ ಪಚ್ಚನಾಡಿ, ಮಾನವ ಹಕ್ಕುಗಳ ಸಮಿತಿಯ ಉಪಾಧ್ಯಕ್ಷೆ ಲೋಲಾಕ್ಷಿ ಸಾಲ್ಯಾನ್, ನಿತಿನ್ ರಾಜ್, ಚಂದ್ರಿಕಾ, ಶಿಕ್ಷಕಿಯರಾದ ಹೇಮಲತಾ, ಜಿ.ಜಿ. ಅಬ್ರಾಹಂ, ಅನಿಷಾ, ಅಮಿತ್, ಬಸವಲಿಂಗಪ್ಪ ನಗರದ ಶ್ರೀ ಸತ್ಯ ಸಾರಮಣಿ ದೈವಸ್ಥಾನ ಸಮಿತಿಯ ಸದಸ್ಯರು ಹಾಗೂ ಪಚ್ಚನಾಡಿಯ ಪೌರ ಕಾರ್ಮಿಕರ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದರು.





