ಪದ್ಮಲತಾ ಅತ್ಯಾಚಾರ-ಹತ್ಯೆ ಪ್ರಕರಣವೂ ಎಸ್ಐಟಿ ತನಿಖೆಯಾಗಲಿ: ಪ್ರಕಾಶ್ ಕೆ. ಒತ್ತಾಯ

ಬೆಳ್ತಂಗಡಿ: ದಶಕಗಳ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಸಿಪಿಎಂ ಮುಖಂಡ ದೇವಾನಂದ ಅವರ ಪುತ್ರಿ ಪದ್ಮಲತಾರ ಮನೆಗೆ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಕೆ. ನೇತೃತ್ವದ ತಂಡ ಭೇಟಿ ನೀಡಿ ಸಂತ್ರಸ್ತ ಕುಟುಂಬದೊಂದಿಗೆ ಮಾತುಕತೆ ನಡೆಸಿತು.
ಈ ವೇಳೆ ಪದ್ಮಲತಾರ ತಾಯಿ ಹಾಗೂ ಸಹೋದರಿ ಹಾಗೂ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಪ್ರಕರಣದ ಬಗ್ಗೆ ಮುಂದಿನ ತನಿಖೆಗೆ ಒತ್ತಾಯಿಸುವ ಕುರಿತು ಚರ್ಚಿಸಿತು.
ಬಳಿಕ ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಕೆ., ಇದೀಗ ಅನಾಮಿಕ ನೀಡಿದ ದೂರಿನ ಹಿನ್ನಲೆಯಲ್ಲಿ ರಚನೆಯಾಗಿರುವ ಎಸ್.ಐ.ಟಿ.ಯಿಂದಲೇ ಪದ್ಮಲತಾ ಪ್ರಕರಣ, ಆನೆ ಮಾವುತ ಹಾಗೂ ಸಹೋದರಿಯ ಕೊಲೆ ಪ್ರಕರಣ, ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣ, ವೇದವಲ್ಲಿ ಪ್ರಕರಣಗಳ ತನಿಖೆ ನಡೆಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಈ ಎಲ್ಲ ಪ್ರಕರಣಗಳ ಬಗ್ಗೆ ಹಾಗೂ ಧರ್ಮಸ್ಥಳದಲ್ಲಿನ ಜಾಗದ ಹಗರಣಗಳ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ಎಸ್ಐಟಿ ರಚಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಪದ್ಮಲತಾ ಪ್ರಕರಣ ನಡೆದಾಗಲೂ ಸಿಪಿಎಂ ಪಕ್ಷ ನ್ಯಾಯಕ್ಕಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇದೀಗ ಮತ್ತೆ ಈ ಪ್ರಕರಣಗಳಲ್ಲಿ ನ್ಯಾಯ ಕೇಳುತ್ತಿದ್ದೇವೆ ಎಂದವರು ಹೇಳಿದರು.
ಬಿಜೆಪಿ ನಾಯಕ ಆರ್.ಅಶೋಕ್ ಕಮ್ಯೂನಿಸ್ಟರ ವಿರುದ್ಧ ಮಾತನಾಡುತ್ತಿರುವುದು ಮತ್ತು ಕೇರಳ ಸರಕಾರವನ್ನು ಎಳೆದುತರುತ್ತಿರುವುದು ಅವರ ಹತಾಶೆಯನ್ನು ತೋರಿಸಿದೆ. ಜನಪರವಾಗಿ ಧ್ವನಿಯೆತ್ತಬೇಕಾದ ವಿಪಕ್ಷ ನಾಯಕರು ಈ ರೀತಿ ಮಾತನಾಡುತ್ತಿರುವುದು ದುರಂತವಾಗಿದೆ ಎಂದರು.
ಪದ್ಮಲತಾ ಮನೆಗ ಭೇಟಿ ನೀಡಿದ ನಿಯೋಗದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಾದವ ಶೆಟ್ಟಿ, ಕೆ.ಎಸ್.ವಿಮಲಾ, ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್, ಈಶ್ವರಿ ಪದ್ಮುಂಜ ಮತ್ತಿತರರು ಉಪಸ್ಥಿತರಿದ್ದರು.







