ಪಡುಬಿದ್ರೆ : ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಹುಟ್ಟೂರ ಸ್ವಾಗತ

ಪಡುಬಿದ್ರೆ : ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿಯನ್ನು ತನ್ನ ಹುಟ್ಟೂರು ಪಡುಬಿದ್ರೆಯಲ್ಲಿ ಅವರ ಅಭಿಮಾನಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಸಂಜೆ 4 ಗಂಟೆಗೆ ಹೆಜಮಾಡಿ ಟೋಲ್ ಗೇಟ್ ಬಳಿ ತಲುಪಿದ್ದು, ಅಲ್ಲಿ ಅವರನ್ನು ಸ್ವಾಗತಿಸಲಾಯಿತು. ರಕ್ಷಿತಾ ಶೆಟ್ಟಿ ಕಾರಿನಲ್ಲಿ ಬರುತ್ತಿದ್ದಂತೆಯೇ ಅವರನ್ನು ಸುತ್ತುವರಿದ ಅಭಿಮಾನಿಗಳು ರಕ್ಷಿತಾ ಅವರಿಗೆ ಜಯಘೋಷ ಮೊಳಗಿಸಿ ದರು. ಅಲ್ಲಿಂದ ತೆರೆದ ವಾಹನದಲ್ಲಿ ರ್ಯಾಲಿಯಲ್ಲಿ ಹೊರಟು ರಾಷ್ಟ್ರೀಯ ಹೆದ್ದಾರಿ 66ರ ಕನ್ನಂಗಾರ್, ಬೀಡು ಮೂಲಕ ಪಡುಬಿದ್ರೆ ಪೇಟೆ ತಲುಪಿತು. ಹೆದ್ದಾರಿ ಉದ್ದಕ್ಕೂ ಸಾವಿರಾರು ಮಂದಿ ರಕ್ಷಿತ ಶೆಟ್ಟಿಗಾಗಿ ಕಾದು ಕುಳಿತಿದ್ದು, ಪಡುಬಿದ್ರೆ ಪೇಟೆಯಲ್ಲಿ ಜನಜಂಗುಲಿಯೇ ಸೇರಿತ್ತು. ಪೊಲೀಸರು ಜನರನ್ನು ನಿಯಂತ್ರಿಸುತ್ತಿದ್ದು, ಬಂದೋಬಸ್ತ್ ನಡೆಸಿದ್ದರು.
"ಊರಿನ ಜನರ ಅಭಿಮಾನ ನೋಡಿ ತುಂಬಾ ಖುಷಿಯಾಯಿತು"
ಜಾಥಾದ ಉದ್ದಕ್ಕೂ ರಕ್ಷಿತಾ ಶೆಟ್ಟಿ ಸೇರಿದ್ದ ಜನತೆಗೆ ಕೈ ಬೀಸುತ್ತಾ ಚಂಡೆಯ ನಾದಕ್ಕೆ ನೃತ್ಯ ಮಾಡಿದರು. ನಂತರ ಪಡುಬಿದ್ರೆಯ ಬೇಂಗ್ರೆ ಎಂಡ್ ಪಾಯಿಂಟ್‍ನಲ್ಲಿರುವ ರಕ್ಷಿತಾ ಶೆಟ್ಟಿಯವರ ಮನೆಯ ಬಳಿ ಹುಟ್ಟೂರ ಸನ್ಮಾನ ನೆರೆವೇರಿತು.
ರಕ್ಷಿತಾ ಶೆಟ್ಟಿಯವರಿಗೆ ಜಾಥಾದಲ್ಲಿ ಮೀನುಗಾರ ಮಹಿಳೆಯೋರ್ವರು ಬಂಗುಡೆ ಮೀನು ನೀಡುವ ಮೂಲಕ ಸ್ವಾಗತಿಸಿದರು.





