ಪಜೀರು: ಹಲ್ಲೆ, ಕೊಲೆ ಬೆದರಿಕೆ ಆರೋಪ: ದೂರು, ಪ್ರತಿದೂರು ದಾಖಲು

ಕೊಣಾಜೆ: ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರ್ ನಲ್ಲಿ ನಡೆದ ರೋಸ್ ಕಾರ್ಯಕ್ರಮದಲ್ಲಿ ಹೊಡೆದಾಟಕ್ಕೆ ಸಂಬಂಧಿಸಿದಂತೆ ಕೊಣಾಜೆ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.
ಮಂಗಳವಾರ ರಾತ್ರಿ ಪಜೀರ್ ಮೆರ್ಸಿ ಸಭಾಂಗಣದಲ್ಲಿ ವಿವಾಹದ ಕಾರ್ಯಕ್ರಮದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವೇಳೆ ವಿಲ್ಸನ್ ಲೋಬೋ ಎಂಬವರು ತಡೆದು ನಿಲ್ಲಿಸಿ ಏನು ದುರುಗುಟ್ಟಿ ನೋಡುತ್ತೀಯಾ ಎಂದು ವಲೇರಿಯನ್ ಅವರನ್ನು ಪ್ರಶ್ನಿಸಿ ಪಕ್ಕದಲ್ಲಿದ್ದ ಪತ್ನಿ ಸುನಿತಾ ಲೋಬೊ ಬಳಿ ಹೊಡೆಯುವಂತೆ ಸೂಚಿಸಿದ್ದಾರೆ. ಈ ಸಂದರ್ಭ ಸುನಿತಾ ಲೋಬೊ ಕೆನ್ನೆಗೆ ಹೊಡೆದಿದ್ದು ಬಳಿಕ ವಿಲ್ಸನ್ ಲೋಬೊ ಕುರ್ಚಿಯಿಂದ ಹೊಡೆಯುತ್ತಿರುವಾಗ ಅವರ ಪುತ್ರ ವಿಶಾಲ್ ಲೋಬೊ ಹಾಗೂ ಇನ್ನಿಬ್ಬರು ಹಲ್ಲೆ ನಡೆಸಿದ್ದಾರೆ. ಆ ವೇಳೆ ಬೊಬ್ಬೆ ಹಾಕಿದಾಗ ಜನ ಬಂದಿದ್ದು ಆರೋಪಿಗಳು ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾಗಿ ದೂರು ದಾಖಲಿಸಲಾಗಿದೆ. ಪಾವೂರು ಗ್ರಾಮದ ಮಜಿಕಟ್ಟ ನಿವಾಸಿ ವಲೇರಿಯನ್ ಡಿಸೋಜ ಗಾಯಾಳುವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಸುನಿತಾ ಲೋಬೋ, ವಿಲ್ಸನ್ ಲೋಬೋ ಮತ್ತವರ ಪುತ್ರ ವಿಶಾಲ್ ಲೋಬೋ ಪ್ರತಿದೂರು ನೀಡಿದ್ದಾರೆ.
ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ವಲೇರಿಯನ್ ಡಿಸೋಜ ದುರುಗುಟ್ಟಿ ನೋಡಿ ಮೈಗೆ ಕೈ ತಾಗಿಸಿದ್ದು ಪ್ರಶ್ನಿಸಿದಾಗ ನಾನು ಏನು ಬೇಕಾದರೂ ಮಾಡುತ್ತೇನೆಂದು ಗದರಿಸಿ ಹೋದಿದ್ದಾರೆ. ಬಳಿಕ ಎರಡು ಬಿಯರ್ ಬಾಟಲ್ ಗಳೊಂದಿಗೆ ಹಿಂದಿರುಗಿ ಬಂದು ಹೊಡೆದ ಪರಿಣಾಮ ಕಣ್ಣಿನ ಭಾಗಕ್ಕೆ ಗಾಯವಾಗಿದೆ. ಈ ಸಂದರ್ಭ ವಿಲ್ಸನ್ ಲೋಬೋ ತಡೆಯಲು ಬಂದಾಗ ಅವರ ಕೈಗೆ ಕಚ್ಚಿದ್ದು ಮಗ ವಿಶಾಲ್ ನನ್ನು ದೂಡಿ ಹಾಕಿ ಜನರು ಬರುತ್ತಿರುವುದನ್ನು ನೋಡಿ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.







