ಪಾಲಕ್ಕಾಡ್ ವಿಭಾಗದ ರೈಲು ಬಳಕೆದಾರರ ಸಲಹಾ ಸಮಿತಿ ಸಭೆ

ಮಂಗಳೂರು, ಆ.19: ರೈಲು ಪ್ರಯಾಣಿಕರೊಂದುಗೂಡಿ ಉಜ್ವಲ ಭವಿಷ್ಯವನ್ನು ರಚಿಸುವುದು’ ಎಂಬ ಧ್ಯೇಯ ವಾಕ್ಯ ದೊಂದಿಗೆ, ಪಾಲಕ್ಕಾಡ್ ವಿಭಾಗದ ವಿಭಾಗೀಯ ರೈಲು ಬಳಕೆದಾರರ ಸಲಹಾ ಸಮಿತಿಯ 162ನೇ ಸಭೆ ಶುಕ್ರವಾರ ಪಾಲಕ್ಕಾಡ್‌ನ ಡಿಆರ್‌ಎಂ ಕಚೇರಿಯಲ್ಲಿ ನಡೆಯಿತು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್.ಮುಕುಂದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಭಾಗದ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಹಾಗೂ ಪಶ್ಚಿಮ ಕರಾವಳಿ ರೈಲು ಯಾತ್ರಿಕರ ಸಂಘದ ಅಧ್ಯಕ್ಷ ಹನುಮಂತ ಕಾಮತ್ ಸಭೆ ಯಲ್ಲಿ ಭಾಗವಹಿಸಿ ಪಾಲಕ್ಕಾಡ್ ವಿಭಾಗದಡಿ ಬರುವ ಮಂಗಳೂರು ಪ್ರದೇಶದ ಹಲವು ಬೇಡಿಕೆ ಹಾಗೂ ಸಮಸ್ಯೆಗಳನ್ನು ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪ್ರತೀ ಶನಿವಾರ ಸಂಜೆಯ ವೇಳೆ ಮಂಗಳೂರು ಸೆಂಟ್ರಲ್‌ನ ಪ್ಲಾಟ್‌ಫಾರ್ಮ್ 2ರಲ್ಲಿ ರೈಲು ನಿಲ್ಲಿಸಲು ಸ್ಥಳಾವಕಾಶ ಇರುವುದರಿಂದ, ಅದರ ಸದುಪಯೋಗ ಪಡೆದುಕೊಂಡು, ವಾರಕ್ಕೊಮ್ಮೆ ಯಶವಂತಪುರ ಜಂಕ್ಷನ್‌ನಿಂದ ಮಂಗಳೂರು ಜಂಕ್ಷನ್‌ವರೆಗೆ ಸಂಚಾರ ನಡೆಸುವ ಹಗಲು ರೈಲನ್ನು, ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವುದು ಹಾಗು ಮರುದಿನ (ರವಿವಾರ) ಬೆಳಗ್ಗೆ 6:40ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮಂಗಳೂರು ಜಂಕ್ಷನಿಗೆ 6:55ಕ್ಕೆ ತಲುಪಿ ಪ್ರಸ್ತುತ ಇರುವ ವೇಳಾಪಟ್ಟಿಯಂತೆ ತನ್ನ ಮುಂದಿನ ಪ್ರಯಾಣವನ್ನು ಮುಂದುವರಿಸುವಂತೆ ಮಾಡಬೇಕು ಎಂದು ಹನುಮಂತ ಕಾಮತ್ ಒತ್ತಾಯಿಸಿದರು.
ಮಂಗಳೂರು ಸೆಂಟ್ರಲ್‌ನಲ್ಲಿ ಹೊಸ 4 ಮತ್ತು 5ನೇ ಪ್ಲಾಟ್‌ಫಾರಂಗಳ ಕಾರ್ಯಾಚರಣೆ ಆರಂಭಿಸಬೇಕು. ಕೊಂಕಣ ಮತ್ತು ಬೆಂಗಳೂರು-ಮಂಗಳೂರು ಮಾರ್ಗಗಳಲ್ಲಿ ಹೆಚ್ಚು ರೈಲುಗಳನ್ನು ಆರಂಭಿಸಬೇಕು. ಹೊಸ ಪ್ಲಾಟ್ ಫಾರಂ ಆದ ಬಳಿಕ ಮಂಗಳೂರು ಸೆಂಟ್ರಲ್‌ನಿಂದ ಕರ್ನಾಟಕ ಭಾಗಗಳಿಗೆ ಹೊಸ ರೈಲು ಗಾಡಿಗಳನ್ನು ಆರಂಭಿಸಬೇಕು. ಮಂಗಳೂರುನಿಂದ ದಕ್ಷಿಣ ದಿಕ್ಕಿಗೆ (ಕೇರಳ ಹಾಗೂ ತಮಿಳುನಾಡು) ಹೊಸ ರೈಲುಗಳನ್ನು ಆರಂಭಿಸುವುದಿದ್ದರೆ ಅಂತಹ ರೈಲುಗಳನ್ನು ಮಂಗಳೂರು ಜಂಕ್ಷನ್‌ನಿಂದ ಆರಂಭಿಸಬೇಕು ಎಂದು ಸಲಹೆ ನೀಡಿದರು.
ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ರೈಲುಗಳ ಆಗಮನ/ನಿರ್ಗಮನದ ಮಾಹಿತಿಯನ್ನು ಹಾಗು ರೈಲು ಯಾವ ಪ್ಲಾಟ್ ಫಾರ್ಮ್‌ನಲ್ಲಿ ನಿಲ್ಲುತ್ತದೆ ಎಂಬ ಮಾಹಿತಿ ಒದಗಿಸಲು ಡಿಜಿಟಲ್ ಕೋಚ್ ಡಿಸ್ಪ್ಲೇ ಬೋರ್ಡ್ ವ್ಯವಸ್ಥೆ ಮಾಡಬೇಕು. ಮಂಗಳೂರು ಸೆಂಟ್ರಲ್‌ನಲ್ಲಿ ಹೆಚ್ಚುವರಿ ರೈಲುಗಳು ತಂಗಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ 5ನೇ ಪ್ಲಾಟ್‌ಫಾರ್ಮ್ ಹಳಿಯ ಪಕ್ಕ ಇನ್ನೊಂದು ಹೆಚ್ಚುವರಿ ಸ್ಟೇಬಲಿಂಗ್ ಲೈನ್ (ತಂಗುವ ಹಳಿ) ಅಳವಡಿಸಬೇಕು. ಮಂಗಳೂರು ಸೆಂಟ್ರಲ್‌ನ ಬೇ ಲೈನ್ ಪ್ಲಾಟ್‌ಫಾರ್ಮ್‌ನ ಈಗಿರುವ ಉದ್ದವನ್ನು ಹೆಚ್ಚಿಸಿ 16 ಕೋಚ್‌ನ ರೈಲುಗಳು ತಂಗುವ ಸಾಮರ್ಥ್ಯಕ್ಕೆ ಏರಿಸ ಬೇಕು. ಮಂಗಳೂರು ಸೆಂಟ್ರಲ್‌ನ 2/3ನೇ ಪ್ಲಾಟ್‌ಫಾರ್ಮ್‌ನಲ್ಲಿರುವ ಶೌಚಾಲಯವನ್ನು ದುರಸ್ತಿಯ ಸಲುವಾಗಿ ಮುಚ್ಚಲಾ ಗಿವೆ. ಅದನ್ನು ಸಾರ್ವಜನಿಕ ಬಳಕೆಗಾಗಿ ಮತ್ತೆ ತೆರೆಯುಬೇಕು ಇತ್ಯಾದಿ ಬೇಡಿಕೆಯನ್ನು ಹನುಮಂತ ಕಾಮತ್ ಸಭೆಯ ಮುಂದಿಟ್ಟರು.







