ಪಣಂಬೂರು ಸರಣಿ ಅಪಘಾತ: ಮೂವರನ್ನು ಕಳೆದುಕೊಂಡ ಮೊಂಟೆಪದವಿನಲ್ಲಿ ನೀರವ ಮೌನ

ಮನ್ಸೂರ್ / ಅಬೂಬಕರ್ / ಇಬ್ರಾಹೀಂ ಬಟ್ಯಡ್ಕ
ಕೊಣಾಜೆ: ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಸಿಗ್ನಲ್ನಲ್ಲಿ ಸರತಿಯಲ್ಲಿ ನಿಂತಿದ್ದ ವೇಳೆ ಎರಡು ಟ್ಯಾಂಕರ್ಗಳು, ಆಟೊ ರಿಕ್ಷಾ ಮತ್ತು ಕಾರು ಸರಣಿ ಅಪಘಾತಕ್ಕೀಡಾಗಿ ಮೃತಪಟ್ಟ ಮೂವರು ಉಳ್ಳಾಲ ತಾಲೂಕಿನ ಮೊಂಟೆಪದವು ಪರಿಸರದವರಾಗಿದ್ದಾರೆ. ಮೂವರನ್ನು ಕಳೆದುಕೊಂಡ ಮೊಂಟೆಪದವು ಪರಿಸರದಲ್ಲೀಗ ನೀರವ ಮೌನ ಆವರಿಸಿದೆ.
ಮೃತಪಟ್ಟ ಮೂವರ ಪೈಕಿ ಇಬ್ಬರು ಬೀಡಿ ಗುತ್ತಿಗೆದಾರರಾಗಿದ್ದು, ಮತ್ತೊಬ್ಬರು ರಿಕ್ಷಾ ಚಾಲಕರಾಗಿದ್ದಾರೆ. ಮೂವರು ಕೂಡಾ ಸಮಾಜಮುಖಿಯಾಗಿದ್ದುಕೊಂಡು ಎಲ್ಲರೊಂದಿಗೆ ಬೆರೆತುಕೊಳ್ಳುವ, ಮತ್ತೊಬ್ಬರ ಸಂಕಷ್ಟದಲ್ಲಿ ಭಾಗಿಯಾಗುವ ಮನೋಭಾವದ ವ್ಯಕ್ತಿಗಳಾಗಿದ್ದರು.
ಮೊಯ್ದಿನ್ ಕುಂಞಿ ಯಾನೆ ಮನ್ಸೂರ್: ಅಪಘಾತದಲ್ಲಿ ಮೃತಪಟ್ಟ ಆಟೊ ರಿಕ್ಷಾ ಚಾಲಕ ಮೊಯ್ದಿನ್ ಕುಂಞಿ ಯಾನೆ ಮನ್ಸೂರ್ (25) ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮರಿಕ್ಕಳ ನಿವಾಸಿಯಾಗಿದ್ದಾರೆ. ವ್ಯಾಪಾರಿ ಇಬ್ರಾಹೀಂ ಹಾಗೂ ಜಮೀಲ ದಂಪತಿಯ ಪುತ್ರ. ಇಬ್ರಾಹೀಂ ಅವರಿಗೆ ಮೂವರು ಪುತ್ರರು ಹಾಗೂ ಒಬ್ಬ ಪುತ್ರಿಯರಿದ್ದು, ಮನ್ಸೂರ್ ಕೊನೆಯ ಪುತ್ರರಾಗಿ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು.
ಅಬೂಬಕರ್: ಮೊಂಟೆಪದವಿನ ಅಬೂಬಕರ್ (65) ಕಳೆದ ಹಲವು ದಶಕಗಳಿಂದ ಮೊಂಟೆಪದವಿನಲ್ಲಿ ಪ್ರಕಾಶ್ ಬೀಡಿ ಗುತ್ತಿಗೆದಾರರಾಗಿದ್ದುಕೊಂಡು ಗ್ರಾಮದ ಅನೇಕರಿಗೆ ಬೀಡಿ ಉದ್ಯಮಕ್ಕೆ ಬೆಂಬಲ ಸಹಕಾರ ನೀಡುತ್ತಾ ಬಂದವರು. ಪರಿಸರದಲ್ಲಿ ನಡೆಯುವ ಅನೇಕ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೊಂಟೆಪದವು ಹಯಾತ್ ನಗರ ಮಸೀದಿಯ ಕಮಿಟಿ ಸದಸ್ಯರಾಗಿದ್ದರು. ಇವರಿಗೆ ಪತ್ನಿ, ಇಬ್ಬರು ಪುತ್ರ ಹಾಗೂ ನಾಲ್ಕು ಪುತ್ರಿಯರು ಇದ್ದಾರೆ.
ಇಬ್ರಾಹೀಂ ಬಟ್ಯಡ್ಕ: ಮೂಲತ ವರ್ಕಾಡಿ-ನರಿಂಗಾನ ಕಲಿಮಿಂಜ ಬಟ್ಯಡ್ಕ ನಿವಾಸಿ ಇಬ್ರಾಹೀಂ ಬಟ್ಯಡ್ಕ (68) ಅವರು ಕೂಡಾ ಹಲವು ದಶಕಗಳಿಂದ ಬೀಡಿ ಗುತ್ತಿಗೆರರಾಗಿದ್ದು, ದೋಸೆಮನೆ ಹಾಗೂ ಮೊಂಟೆಪದವಿನಲ್ಲಿ ಬೀಡಿ ಕಟ್ಟಿಸುವ ಗುತ್ತಿಗೆದಾರರಾಗಿದ್ದರು. ಸ್ನೇಹ ಜೀವಿಯಾಗಿದ್ದ ಇವರು ಪ್ರತಿಯೊಬ್ಬರಲ್ಲೂ ಉತ್ತಮ ಒಡನಾಟ ಇಟ್ಟುಕೊಂಡಿದ್ದ ವ್ಯಕ್ತಿಯಾಗಿದ್ದರು. ಇವರಿಗೆ ಪತ್ನಿ, ಏಳು ಪುತ್ರರು ಹಾಗೂ ಒಬ್ಬಳು ಪುತ್ರಿ ಇದ್ದಾರೆ.







