ಪರಿವಾಹನ್ ಆನ್‌ಲೈನ್ ಸೇವೆಯಿಂದ ಆರ್‌ಟಿಒ ಕಚೇರಿಯಲ್ಲಿ ಜನದಟ್ಟಣೆ ಶೇ. 60ರಷ್ಟು ಇಳಿಕೆ: ಶ್ರೀಧರ್ ಮಲ್ಲಾಡ್

ಮಂಗಳೂರು, ಆ. 11: ಪರಿವಾಹನ್ ಆನ್‌ಲೈನ್ ಸೇವೆಯಿಂದಾಗಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜನದಟ್ಟಣೆ ಶೇ. 60ರಷ್ಟು ಕಡಿಮೆಯಾಗಿದೆ. ಯಾವುದೇ ಗೊಂದಲವಿಲ್ಲದೆ, ವಾಹನದ ಆರ್‌ಸಿ ಸೇರಿದಂತೆ ಅಗತ್ಯ ಸೇವೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್‌ಗಳನ್ನು ಸಾರ್ವಜನಿಕರು ಪಡೆಯುತ್ತಿದ್ದಾರೆ ಎಂದು ಮಂಗಳೂರು ಪಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ತಿಳಿಸಿದ್ದಾರೆ.
ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಅನಾವಶ್ಯಕವಾಗಿ ಕಚೇರಿಗೆ ಬಂದು ಕಾಯುವುದು, ಒಂದು ಕೌಂಟರ್‌ನಿಂದ ಇನ್ನೊಂದು ಕೌಂಟರ್‌ಗೆ ಅಲೆದಾಡುವ ಪರಿಸ್ಥಿತಿಯೂ ಈ ಆನ್‌ಲೈನ್ ವ್ಯವಸ್ಥೆಯಿಂದ ತಪ್ಪಿದೆ. ಪ್ರತಿದಿನ ಸುಮಾರು 600ರಷ್ಟು ಆರ್‌ಸಿ, ಸುಮಾರು 400ರಷ್ಟು ಡಿಎಲ್‌ಗಳು ಅಂಚೆ ಮೂಲಕ ಅರ್ಜಿದಾರರ ಮನೆಗಳಿಗೆ ರವಾನೆಯಾಗುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 1,4000 ಸ್ಮಾರ್ಟ್ ಕಾರ್ಡ್‌ಗಳನ್ನು ಮನೆಗಳಿಗೆ ತಲುಪಿಸಲಾಗಿದೆ.
parivahan.gov.in ನ ಹೋಮ್ ಸ್ಕ್ರೀನ್‌ನಲ್ಲಿ ನಿಮ್ಮ ಆರ್‌ಸಿ ಮತ್ತು ಡಿಎಲ್‌ನ ಮೊಬೈಲ್ ನಂಬರ್ ಅಪ್ಡೇಟ್ ಮಾಡಲು ಅವಕಾಶವಿದೆ. ಸರಿಯಾದ ಮೊಬೈಲ್ ನಂಬರ್ ಅಪ್ಡೇಟ್ ಮಾಡಿದ್ದಲ್ಲಿ ವಾಹನದ ಫಿಟ್ನೆಸ್, ರಿಜಿಸ್ಟ್ರೇಶನ್ ಅಥವಾ ಬಾಕಿ ಇರುವ ದಂಡಗಳ ಚಲನ್ ಬಗ್ಗೆಯೂ ಮಾಹಿತಿ ನೇರವಾಗಿ ಮೊಬೈಲ್‌ಗೆ ಬರುತ್ತವೆ. ಸ್ಮಾರ್ಟ್ ಸಿಟಿ ವತಿಯಿಂದ ಈಗಾಗಲೇ ಇ ಚಲನ್ ವ್ಯವಸ್ಥೆ ಜಾರಿಯಲ್ಲಿದೆ. ಮೊಬೈಲ್ ನಂಬರ್ ಅಪ್ಡೇಡ್ ಇದ್ದಲ್ಲಿ ಯಾವುದೇ ರೀತಿಯ ವಾಹನ ಚಾಲನೆಯ ಸಂದರ್ಭದ ಉಲ್ಲಂಘನೆಗೆ ಸಂಬಂಧಿಸಿ ವಿಧಿಸಲಾಗುವ ದಂಡದ ಚಲನ್ ಬಗ್ಗೆ ಮೊಬೈಲ್ ನಂಬರ್‌ಗೆ ನೇರವಾಗಿ ಮಾಹಿತಿ ರವಾನೆಯಾಗುತ್ತದೆ. ಇಲ್ಲವಾದಲ್ಲಿ ಇ ಚಲನ್ ಹಾಕಿರುವ ವಿಷಯ ವಾಹನ ಮಾಲಕರ ಗಮನಕ್ಕೆ ಬಾರದಿರಬಹುದು. ಈ ಆನ್‌ಲೈನ್ ವ್ಯವಸ್ಥೆಯಿಂದ ಮೊಬೈಲ್ ಅಪ್ಡೇಟ್ ಇದ್ದಲ್ಲಿ ಇನ್ಶೂರೆನ್ಸ್ ಅಥವಾ ವಾಯು ಮಾಲಿನ್ಯ ಸರ್ಟಿಫಿಕೇಟ್ ಅವಧಿ ಮುಗಿದಿರುವುದು ಅಥವಾ ವಾಹನ ಚಾಲನಾ ಪರವಾನಿಗೆ ಅವಧಿ ಮೀರುವ ಕೆಲ ದಿನಗಳ ಮುಂಚಿತವಾಗಿಯೇ ಸಂದೇಶ ರವಾನೆಯಾಗುತ್ತದೆ.
parivahan.gov.in ನ ಹೋಂ ಪೇಜ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ವಾಹನದ ನಂಬರ್ ಮತ್ತು ಚೇಸಿಸ್ ನಂಬರ್ ಹಾಗೂ ಆಧಾರ್ ನಂಬರ್ ಹಾಕಿದಾಗ ಮೊಬೈಲ್ ಸಂಖ್ಯೆ ಅಪ್ಡೇಟ್ ಆಗುತ್ತದೆ. ಇಲ್ಲವಾದಲ್ಲಿ ಆಧಾರ್ ಕಾರ್ಡ್‌ನ್ನು ಕಚೇರಿಗೆ ತಂದು ಮೊಬೈಲ್ ನಂಬರ್ ಅಪ್ಡೇಟ್ ಮಾಡಲಾಗುತ್ತದೆ. ನಗರದ ಎಲ್ಲೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹಾಗಾಗಿ ಸಾರ್ವಜನಿಕರು ತಮ್ಮ ಮೊಬೈಲ್ ನಂಬರ್ ಅಪ್ಡೇಟ್ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಪುತ್ತೂರು ಸಾರಿಗೆ ಅಧಿಕಾರಿ ವಿಶ್ವನಾಥ ಅಜಿಲ, ಬಂಟ್ವಾಳ ಉಪ ಸಾರಿಗೆ ಅಧಿಕಾರಿ ಚರಣ್ ಉಪಸ್ಥಿತರಿದ್ದರು.
ಬಸ್‌ಗಳಲ್ಲಿ ಟಿಕೆಟ್ ಕಡ್ಡಾಯ
ಬಹುತೇಕ ಬಸ್‌ಗಳಲ್ಲಿ ಪ್ರಯಾಣಿಕರಿಗೆ ನಿರ್ವಾಹಕರು ಟಿಕೆಟ್ ನೀಡುತ್ತಿಲ್ಲ. ಹಾಗಾಗಿ ನಾವು ಕೊಟ್ಟ ಹಣಕ್ಕೆ ಗ್ಯಾರಂಟಿ ಏನು ಎಂದು ಸಭೆಯಲ್ಲಿ ವ್ಯಕ್ತವಾದ ಆಕ್ಷೇಪಕ್ಕೆ ಪ್ರತಿಕ್ರಿಯಿಸದಿ ಆರ್‌ಟಿಒ ಶ್ರೀಧರ್ ಮಲ್ಲಾಡ್, ಟಿಕೆಟ್ ನೀಡುವುದು ಕಡ್ಡಾಯ ಎಂದರು.
ನಾನು ಕೂಡಾ ವಾರದಲ್ಲಿ ಎರಡು ಬಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೇನೆ. ಟಿಕೆಟ್ ನೀಡದ ಬಸ್ ನಿರ್ವಾಹಕರಿಗೆ ದಂಡ ವಿಧಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.
ಶೀಘ್ರವೇ ರೈಲ್ವೇ ಸ್ಟೇಷನ್‌ಗಳಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್
ರೈಲ್ವೇ ಸ್ಟೇಷನ್‌ಗಳಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್ ತೆರೆಯಲು ಈ ಹಿಂದಿನ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಪಾಲ್ಘಾಟ್ ಮತ್ತು ಮೈಸೂರಿನಲ್ಲಿ ಅಧ್ಯಯನ ನಡೆಸಲಾಗಿದೆ. ಪಾರ್ಕಿಂಗ್ ಬಾಡಿಗೆ ವಿಷಯದಲ್ಲಿ ಸ್ವಲ್ಪ ಗೊಂದಲವಿದ್ದು, ಅದನ್ನು ನಿವಾರಿಸಿ ಶೀಘ್ರವೇ ಕೌಂಟರ್ ಆರಂಭಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ತಿಳಿಸಿದರು.
ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಸಾರ್ವಜನಿಕ ಕುಂದು ಕೊರತೆ ಆಲಿಕೆ ಸಭೆಯಲ್ಲಿ ಸಾರ್ವಜನಿಕರ ದೂರಿಗೆ ಈ ಪ್ರತಿಕ್ರಿಯೆ ನೀಡಿದರು.
ಸಭೆಯಲ್ಲಿ ಈ ಇ ರಿಕ್ಷಾ ಪರವಾನಿಗೆ ಸಂಬಂಧಿಸಿ ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆ ಬಗ್ಗೆ ಕೈಗೊಳ್ಳ ಲಾಗಿರುವ ಕ್ರಮದ ಬಗ್ಗೆ ಸಾರ್ವಜನಿಕರಿಂದ ವ್ಯಕ್ತವಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಧಱ್ ಮಲ್ನಾಡ್, ಇ ಆಟೋ ಮತ್ತು ಇತರ ಆಟೋಗಳ ಪರವಾನಿಗೆ ಕುರಿತ ಎಲ್ಲಾ ಸಮಸ್ಯೆಗಳ ಕುರಿತು ಆ. 18ರಂದು ನಡೆಯುವ ಆರ್‌ಟಿಎ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ನೂತನ ಡಿಸಿ ಕಚೇರಿಗೆ ಸೂಕ್ತ ಬಸ್ ವ್ಯವಸ್ಥೆ
ನೂತನ ಜಿಲ್ಲಾಧಿಕಾರಿ ಕಚೇರಿಗೆ ನಗರ ಹಾಗೂ ನಗರದ ಹೊರ ಭಾಗಗಳಿಂದ ನೇರ ಬಸ್ ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಆಗ್ರಹಿಸಿದಾಗ, ಕುಲಶೇಖರ ಮೂಲಕ ಮೂಡಬಿದ್ರೆ ಯಿಂದ ಬರುವ ಬಸ್ಸುಗಳು ಮಲ್ಲಿಕಟ್ಟೆಯಲ್ಲಿ ಟರ್ನ್ ಆಗಿ ಸಂಚರಿಸುವ ಬಸ್ಸುಗಳನ್ನು ವಯಾ ಮರೋಳಿ ಜಂಕ್ಷನ್, ಪಡೀಲ್ ಜಂಕ್ಷನ್ ಆಗಿ ನೂತನ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಸಂಚರಿಸಲು ಯೋಜನೆ ರೂಪಿಸಲಾಗಿದೆ. ಕಂಕನಾಡಿಗೆ ಪರವಾನಿಗೆ ಕೊನೆಯಾಗುವ ಬಸ್ಸುಗಳನ್ನು ಪಡೀಲ್ ಜಂಕ್ಷನ್‌ಗೆ ಮಾರ್ಪಡಿಸಲು ಯೋಜನೆ ಮಾಡ ಲಾಗಿದ್ದು, ಕೆಎಸ್‌ಆರ್‌ಟಿಸಿಯವರಿಗೂ ಈ ಬಗ್ಗೆ ಹೊಸ ಅರ್ಜಿ ಬಂದಿದ್ದಲ್ಲಿ ಆ. 18ರ ಆರ್‌ಟಿಎ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಖಾಸಗಿ ಬಸ್ ಮಾಲಕರು ಯಾವುದಾದರೂ ಬದಲಾವಣೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಪಿಎಂಇ ಯೋಜನೆಯಡಿ ಮಂಗಳೂರು ಸ್ಮಾರ್ಟ್ ಸಿಟಿಗೆ 100 ಇ ಬಸ್‌ಗಳು ಮಂಜೂರಾಗಿವೆ. ಬಿಜೈನ ಬಸ್ಸು ನಿಲ್ದಾಣ ಈಗಾಗಲೇ ದಟ್ಟಣೆಯಿಂದ ಕೂಡಿದೆ. ಕುಂಟಿಕಾನದಲ್ಲಿ 135 ಬಸ್ಸುಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಹೆಚ್ಚವರಿ ಬಸ್‌ಗಳಿಂದ ತೊಂದರೆಯಾಗಬಹುದು. ಹಾಗಾಗಿ ಮುಡಿಪು ಬಾಳೆಪುಣಿಯಲ್ಲಿ ಈ ಹೊಸ ಬಸ್‌ಗಳ ನಿರ್ವಹಣೆಗೆ ಜಾಗ ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಮಟ್ಟದಿಂದ ಸರಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸದ್ಯ ಪ್ರಕ್ರಿಯೆದಲ್ಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಸಬೆಗೆ ಮಾಹಿತಿ ನೀಡಿದರು.
ಇಲೆಕ್ಟ್ರಿಕ್ ಆಟೋ ರಿಕ್ಷಾಗಳ ಸಂಕ್ಯೆ ಹೆಚ್ಚಾಗಿದ್ದು, ಯಾರು ಕೂಡಾ ರಿಕ್ಷಾ ಖರೀದಿಸುವ ಅವಕಾಶ ಇರುವುದರಿಂದ ಈ ಬಗ್ಗೆ ಸೂಕ್ತ ನಿಯಮ ಜಾರಿಗೊಳಿಸಬೇಕು. ಬಸ್‌ಗಳ ಕರ್ಕಶ ಹಾರ್ನ್ ಬಗ್ಗೆ ಗಮನ ಹರಿಸಬೇಕು. ಶಕ್ತಿ ಯೋಜನೆ ಮಂಗಳೂರಿನ ಮಹಿಳಿಯರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಸರಕಾರಿ ಬಸ್ಸುಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಆಗ್ರಹಿಸಿದರು.
ರೈಲ್ವೇ ಸ್ಟೇಷನ್‌ಗಳಿಗೆ ಪರವಾನಿಗೆ ಇಲ್ಲದ ಬಸ್ಸುಗಳ ಸಂಚಾರದಿಂದ ಟ್ಯಾಕ್ಸಿಗಳಿಗೆ ಬಾಡಿಗೆ ಇಲ್ಲದೆ ತೊಂದರೆ ಯಾಗಿದೆ ಎಂದು ಟ್ಯಾಕ್ಸಿಮೆನ್ ಅಸೋಸಿಯೇಶನ್‌ನ ದಿನೇಶ್ ಕುಂಪಲ ಹೇಳಿದರು.
ಬಸ್ಸುಗಳಲ್ಲಿ ಕನ್ನಡದಲ್ಲಿ ಬೋರ್ಡ್ ಅಳವಡಿಸಬೇಕೆಂಬ ನಿಯಮವಿದ್ದರೂ ಜಾರಿಯಾಗುತ್ತಿಲ್ಲ ಎಂದು ಜಿ.ಕೆ. ಭಟ್ ಆಕ್ಷೇಪಿಸಿದರೆ, ಇ ಆಟೋ ರಿಕ್ಷಾಗಳ ಪರವಾನಿಗೆ ಸಂಬಂಧಿಸಿ ಸೂಕ್ತ ನಿರ್ಧಾರ ಆಗಿಲ್ಲದ ಕಾರಣ ಗೊಂದಲ ಉಂಟಾಗಿದೆ ಎಂದು ಆಟೋ ಚಾಲಕರ ಸಂಚಾಲಕ ಗಣೇಶ್ ಗಮನ ಸೆಳೆದರು.
ಚೂಡಾಮಣಿ, ಭಾಸ್ಕರ್, ಶೇಖರ್ ದೇರಳಕಟ್ಟೆ ಮೊದಲಾದವರು ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಸಭೆಯಲ್ಲಿ ದ.ಕ. ಜಿಲ್ಲಾ ಖಾಸಗಿ ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳು, ಆಟೋರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.







