ವರ್ಣಚಿತ್ರ ಕಲಾವಿದ ಚಂದ್ರನಾಥ ಆಚಾರ್ಯರಿಗೆ ಪರ್ಲಡ್ಕ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ

ಪುತ್ತೂರು: ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುತ್ತೂರು ಪರ್ಲಡ್ಕ ಡಾ. ಶಿವರಾಮ ಕಾರಂತ ಬಾಲವನ, ಪುತ್ತೂರು ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಉಪವಿಭಾಗ ವತಿಯಿಂದ ಪ್ರತಿವರ್ಷ ನೀಡಲಾಗುತ್ತಿರುವ ಡಾ.ಶಿವರಾಮ ಕಾರಂತರ ಬಾಲವನ ಪ್ರಶಸ್ತಿಗೆ ಈ ಬಾರಿ ಮೂಲತಃ ಪುತ್ತೂರು ನಿವಾಸಿ ಬೆಂಗಳೂರಿನ ಖ್ಯಾತ ವರ್ಣಚಿತ್ರ ಕಲಾವಿದ ಕೆ. ಚಂದ್ರನಾಥ ಆಚಾರ್ಯ ಆಯ್ಕೆಯಾಗಿದ್ದಾರೆ.
ಅ.10ರಂದು ಪುತ್ತೂರಿನ ಬಾಲವನದಲ್ಲಿ ನಡೆಯಲಿರುವ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮೂಲತ: ಡಾ ಶಿವರಾಮ ಕಾರಂತರ ಬಾಲವನ ಸಮೀಪದ ಪರ್ಲಡ್ಕ ನಿವಾಸಿಯಾಗಿದ್ದು, ಡಾ. ಕಾರಂತರ ಒಡನಾಡಿ ಯಾಗಿದ್ದ ಚಂದ್ರನಾಥ ಆಚಾರ್ಯ ಅವರು ಬಾಲ್ಯದಲ್ಲಿಯೇ ಕಲಾಸಕ್ತಿಯನ್ನು ಮೂಡಿಸಿಕೊಂಡ ಇವರು ತಮ್ಮ ಕಾಲೇಜು ಜೀವನದಲ್ಲಿ ಆಗಿನ ಪ್ರಸಿದ್ಧ ಪತ್ರಿಕೆ ಮಲ್ಲಿಗೆಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಪುಸ್ತಕಗಳ ಮುಖಚಿತ್ರ ಕಲಾವಿದನಾಗಿ ಕೆಲಸ ಮಾಡಿದ್ದಾರೆ. ಕಲಾವಿದ ಆರ್. ಎಂ. ಹಡಪದರ ಕೆನ್ ಸ್ಕೂಲ್ ಆಫ್ ಆರ್ಟ್‍ನ ವಿದ್ಯಾರ್ಥಿಯಾಗಿದ್ದಾರೆ.
ಪ್ರಜಾವಾಣಿ ಬಳಗದ ಕಲಾವಿದರಾಗಿ ಸೇರಿ ಸುಧಾ, ಮಯೂರಗಳಲ್ಲಿ ನವ್ಯದ ಜೊತೆಗೆ ಜನಪ್ರಿಯ ಕಥೆ ಕಾದಂಬರಿಗಳಿಗೆ ಚಿತ್ರ ರಚಿಸಿದ್ದಾರೆ. ಶಾಂತಿನಿಕೇತನದಲ್ಲಿ ಗ್ರಾಫಿಕ್ಸ್‍ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಮತ್ತೆ ಪತ್ರಿಕಾ ಕೆಲಸಕ್ಕೆ ಸೇರಿದರು. ಚಿತ್ರರಂಗದಲ್ಲಿ ಕೆಲಸ ಮಾಡಿರುವ ಇವರು ಲಂಕೇಶರ ಪಲ್ಲವಿ ಎಲ್ಲಿಂದಲೂ ಬಂದವರು ಅನುರೂಪ ಮತ್ತು ಗಿರೀಶ್ ಕಾರ್ನಾಡರ, ಘಟಶ್ರಾದ್ಧ ಚಲನಚಿತ್ರಗಳಿಗೆ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಖ್ಯಾತ ಚಿತ್ರ ಕಲಾವಿದೆ, ಕೆಕೆ ಹೆಬ್ಬಾರರ ಗರಡಿಯಲ್ಲಿ ಪಳಗಿದ ಇವರು ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ವಿದ್ವಾಂಸ ಪ್ರವೇಶ ಪಡೆದು ಎರಡು ವರ್ಷ, ಗ್ರಾಫಿಕ್ಸ್‍ನಲ್ಲಿ ಉನ್ನತ ಅಧ್ಯಯನವನ್ನು ಮಾಡಿದ್ದಾರೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಹೆಸರು ತಂದು ಕೊಟ್ಟಿರುವ ಇವರು ಇದುವರೆಗೂ ಏಳು ಬಾರಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ನಡೆಸಿ ಕೊಟ್ಟಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ, ಲಲಿತಕಾಲ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರವು ಕೊಡ ಮಾಡುವ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿಯು 25 ಸಾವಿರ ರೂ.ಗಳ ನಗದು ಪುರಸ್ಕಾರ, ಕಾರಂತರ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ.







