ಬೈಕಂಪಾಡಿ | ಫಲ್ಗುಣಿಗೆ ಮತ್ತೆ ಕಲುಷಿತ ನೀರು ಬಿಡುತ್ತಿರುವ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕ: ಆರೋಪ
ವಾರದೊಳಗೆ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬೀಗ ಜಡಿದು ಪ್ರತಿಭಟನೆಯ ಎಚ್ಚರಿಕೆ

ಪಣಂಬೂರು, ಜು.29: ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿರುವ ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕ ಸೋಮವಾರದಿಂದ ಮತ್ತೆ ಮಾರಕ ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ಫಲ್ಗುಣಿ ನದಿಗೆ ಬಿಡುತ್ತಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಆರೋಪಿಸಿದೆ.
ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕವು ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ಫಲ್ಗುಣಿ ನದಿಗೆ ಬಿಡುತ್ತಿರುವ ಬಗ್ಗೆ ಜೋಕಟ್ಟೆ ನಾಗರಿಕ ಹೊರಟ ಸಮಿತಿಯು ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಜೂ.24ರಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ.ಮಹೇಶ್ವರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರುಚಿ ಸೋಯಾ ಘಟಕಕ್ಕೆ ಭೇಟಿ ನೀಡಿ ತಪಾಸನೆ ನಡೆಸಿತ್ತು. ಅಲ್ಲದೆ, ಮೇಲ್ನೋಟಕ್ಕೆ ಘಟಕದಿಂದ ಕಲುಷಿತ ನೀರು ನದಿ ಸೇರುತ್ತಿರುವುದನ್ನು ಮನಗಂಡು ಘಟಕಕ್ಕೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ಗೆ ಘಟಕವು ಉತ್ತರಿಸಿತ್ತು. ಬಳಿಕ ಅದರ ಉತ್ತರವನ್ನು ಬೆಂಗಳೂರಿನ ಪ್ರಧಾನ ಕಚೇರಿಗೆ ರವಾನಿಸಲಾಗಿದ್ದು, ಅಲ್ಲಿಂದಲೇ ಮುಂದಿನ ತನಿಖೆ ನಡೆದು ಕ್ರಮ ಕೈಗೊಳ್ಳುತ್ತಾರೆ ಎಂದು ಮಂಗಳೂರು ಮಾಲಿನ್ಯ ಮಂಡಳಿಯ ಅಧಿಕಾರಿಗಳು ಹೇಳಿದ್ದರು. ಇದೀಗ ಪ್ರಕರಣವು ತನಿಖೆಯ ಹಂತದಲ್ಲಿರುವಾಗಲೇ ಕಂಪೆನಿ ಜು.29ರಿಂದ ಮತ್ತೆ ಮಾರಕ ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ಫಲ್ಗುಣಿ ನದಿಗೆ ಬಿಡುತ್ತಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸದಸ್ಯ ಹಾಗೂ ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯ ಅಬೂಬಕರ್ ಬಾವಾ ಸಾಕ್ಷ್ಯ ಸಹಿತ ಬಯಲು ಮಾಡಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರು, ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕವು ಮಾರಕ ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ಪಲ್ಗುಣಿ ನದಿಗೆ ಬಿಡುತ್ತಿರುವುದು ಇದು ಮೊದಲೇನಲ್ಲ. ಈ ಬಗ್ಗೆ ಹಲವು ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರೂ ನಮ್ಮ ಜೀವನದಿ ಫಲ್ಗುಣಿ ನದಿಗೆ ಸಂಚಕಾರ ಉಂಟು ಮಾಡುವುದನ್ನು ಕಂಪೆನಿ ಮುಂದುವರಿಸಿದೆ. ಕಲುಷಿತ ನೀರು ಬಿಡುತ್ತಿರುವ ಕುರಿತಾಗಿ ತನಿಖೆ ನಡೆಯುತ್ತಿರುವ ಹಂತದಲ್ಲೂ ಕಾನೂನಿನ ಯಾವುದೇ ಅಂಜಿಕೆ ಇಲ್ಲದೆ ಮತ್ತೆ ಮತ್ತೆ ಮಾರಕ ಕೈಗಾರಿಕಾ ತ್ಯಾಜ್ಯವನ್ನು ನದಿಗೆ ಬಿಡುತ್ತಿದ್ದಾರೆ. ಹಾಗಾಗಿ ಸಂಬಂಧ ಪಟ್ಟವರು ಶೀಘ್ರ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕಕ್ಕೆ ಬೀಡ ಜಡಿಯಬೇಕು. ಇಲ್ಲವಾದರೆ ಒಂದು ವಾರದೊಳಗಾಗಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯು ನಾಗರಿಕರನ್ನು ಒಗ್ಗೂಡಿಸಿಕೊಂಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ಬೀಗಜಡಿಲಿದೆ ಎಂದು ಎಚ್ಚರಿಕೆ ನೀಡಿದರು.







