ಪಾವೂರು: ಗ್ರಾಪಂ ಸದಸ್ಯರ ವಿರುದ್ಧ ಹಕ್ಕೊತ್ತಾಯ ಸಭೆ

ಕೊಣಾಜೆ, ಅ.27: ಪಾವೂರು ಗ್ರಾಮದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಸಿಗದಿರಲು ಹಾಗೂ ಗ್ರಾಮದ ಅಭಿವೃದ್ಧಿ ಕುಂಠಿತವಾಗಲು ಕಾರಣಕರ್ತರಾಗಿರುವ ಗ್ರಾಪಂನ ಕೆಲವು ಸದಸ್ಯರ ವಿರುದ್ಧ ಹಕ್ಕೊತ್ತಾಯ ಸಭೆಯು ಶುಕ್ರವಾರ ಮಲಾರ್ ಜಂಕ್ಷನ್‌ನಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು "ಪಾವೂರು ಗ್ರಾಪಂನ ಕೆಲವು ಸದಸ್ಯರು ಸಾಮಾನ್ಯ ಸಭೆಗೆ ಸತತ ಮೂರು ಬಾರಿ ಗೈರು ಹಾಜರಾಗುವ ಮೂಲಕ ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಮತ್ತು ಗ್ರಾಮದ ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆ. ಸಾಮಾನ್ಯ ಸಭೆ ನಡೆಯದೆ 9/11, ಡೋರ್ ನಂಬರ್, ಲೈಸನ್ಸ್, ದಾರಿ ದೀಪ ಮುಂತಾದವುಗಳಿಗೆ ಅನುಮೋದನೆ ಸಿಗುತ್ತಿಲ್ಲ. ಹಾಗಾಗಿ ಸಾಮಾನ್ಯ ಸಭೆಗೆ ಗೈರಾಗುತ್ತಿರುವ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.
ಸಭೆಯಲ್ಲಿ ಪಾವೂರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್, ಮಾಜಿ ಸದಸ್ಯರಾದ ಮುಹಮ್ಮದ್ ಚಕ್ಕರ್, ಹಸನ್ ಎಂಪಿ, ವಿವೇಕ್ ರೈ, ಪ್ರಮುಖರಾದ ಪ್ರಭಾಕರ್ ಶೆಟ್ಟಿ, ಹನೀಫ್ ಕೆ.ಎಂ, ವಿನ್ಸೆಂಟ್ ಲೋಬೋ, ಅರ್ಮಾನ್ ಕಿಲ್ಲೂರು, ಕಿರಣ್ ಪೂಜಾರಿ, ದಾಮೋದರ್ ಪೂಜಾರಿ ಅಲ್ತಾಫ್ ಹಾಮದ್, ಶಿವಪ್ಪ ಪಜಿಲ ಮೊದಲಾದವರು ಉಪಸ್ಥಿತರಿದ್ದರು. ಹಕ್ಕೊತ್ತಾಯ ಸಭೆಯ ಬಳಿಕ ಪಿಡಿಒ ಕೃಷ್ಣಕುಮಾರ್‌ಗೆ ಮನವಿ ಸಲ್ಲಿಸಲಾಯಿತು.





